×
Ad

‘ಬಿಜೆಪಿಗರು ತಿರಂಗಾ ಯಾತ್ರೆ ಬದಲು ಟ್ರಂಪ್ ಯಾತ್ರೆ ಮಾಡಲಿ’ ಹೇಳಿಕೆ | ಸಚಿವ ಸಂತೋಷ್ ಲಾಡ್- ವಿಜಯೇಂದ್ರ ಜಟಾಪಟಿ

Update: 2025-05-16 18:40 IST

ಸಂತೋಷ್ ಲಾಡ್ /ಬಿ.ವೈ.ವಿಜಯೇಂದ್ರ

ಬೆಂಗಳೂರು : ಕಾಶ್ಮೀರದ ಪಹಲ್ಗಾಮ್‍ನ ಭಯೋತ್ಪಾದಕರ ದಾಳಿ, ಆ ಬಳಿಕ ನಡೆದ ‘ಆಪರೇಷನ್ ಸಿಂಧೂರ್’ ಹಾಗೂ ಯೋಧರ ಬೆಂಬಲಿಸಿ ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆ ವಿಚಾರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವೆ ಜಟಾಪಟಿ ಶುರುವಾಗಿದೆ.

ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ವಿಜಯೇಂದ್ರ, ‘ಭಾರತವನ್ನು ದುಸ್ಥಿತಿಗೆ ತರಲು ಹೊರಟಿದ್ದ ಕಾಂಗ್ರೆಸ್ ಅನ್ನು ದೇಶದ ಜನತೆ ಇಂದು ದಯನೀಯ ಸ್ಥಿತಿಗೆ ತಲುಪಿಸಿದ್ದಾರೆ, ಇಷ್ಟಾದರೂ ಬುದ್ಧಿ ಕಲಿಯದ ನೀವು ಕುಯುಕ್ತಿಯ ಮಾತನಾಡುವುದನ್ನು ನಿಲ್ಲಿಸುವುದೇ ಇಲ್ಲ. ಒಗ್ಗಟ್ಟಿನ ಮನೆಯಲ್ಲಿ ಒಡಕು ಮೂಡಿಸುವ, ಮತಬ್ಯಾಂಕ್ ರಾಜಕಾರಣವನ್ನು ಪೋಷಿಸಿಕೊಂಡು ಬರುವ ನಿಮ್ಮಿಂದ ಬಿಜೆಪಿ ಹಾಗೂ ಕಾರ್ಯಕರ್ತರು ಪಾಠ ಹೇಳಿಸಿಕೊಳ್ಳುವ ಸ್ಥಿತಿ ಈ ಶತಮಾನದಲ್ಲಂತೂ ಬರುವುದಿಲ್ಲ ಎನ್ನುವ ಸತ್ಯ ಪ್ರಚಾರಕ್ಕಾಗಿ ಒಟಗುಟ್ಟುವ ನಿಮಗೆ ತಿಳಿದಿರಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸಚಿವ ಸಂತೋಷ್ ಲಾಡ್ ಅವರೇ, ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು?. ರಕ್ಷಣೆ ಇಲ್ಲದ ಅಸಹಾಯಕ ಸ್ಥಿತಿಯಲ್ಲಿ ಲಕ್ಷಾಂತರ ಮೂಲ ನಿವಾಸಿ ಕಾಶ್ಮೀರಿ ಪಂಡಿತರ ಕೊಲೆ, ಅತ್ಯಾಚಾರದ ದೌರ್ಜನ್ಯಗಳನ್ನು ಅನುಭವಿಸಿ ಕಾಶ್ಮೀರ ತೊರೆಯುವಂತಾಗಲು ಕಾರಣರಾದವರಾರು?. ಪಾಕ್ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ಬಿಟ್ಟುಕೊಟ್ಟವರಾರು? ಅವಕಾಶವಿದ್ದರೂ ಪಿಒಕೆ ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಕಾಂಗ್ರೆಸ್ ಹಾಗೂ ಅದರ ಸ್ವಾರ್ಥ ಆಡಳಿತ ಇದಕ್ಕೆಲ್ಲ ಕಾರಣ ಎನ್ನುವುದು ದೇಶದ ಜನತೆಗೆ, ಜಗತ್ತಿಗೇ ತಿಳಿದ ಸತ್ಯ’ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಜವಾಬ್ದಾರಿ ಮೆರೆದವರು ಯಾರು?: ‘ಶಾಸಕ ವಿಜಯೇಂದ್ರ ಅವರೇ, ಭಾರತದ ಸಿರಿ ಕಿರೀಟ ಕಾಶ್ಮೀರದ ಪೆಹೆಲ್ಗಾಮ್‍ನ ಬೈಸನ್ ವ್ಯಾಲಿಯಲ್ಲಿ ಸರಿಯಾದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ ಬೇಜವಾಬ್ದಾರಿ ಮೆರೆದವರು ಯಾರು?. ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯಗಳನ್ನು ಕೇವಲ ಚುನಾವಣಾ ಪ್ರಚಾರದ ಸರಕಾಗಿಸಿಕೊಂಡು ಅವರ ಭಾವನೆಗಳೊಂದಿಗೆ ಆಟವಾಡುತ್ತಿರುವವರು ಯಾರು?’ ಎಂದು ಸಚಿವ ಸಂತೋಷ್ ಲಾಡ್ ‘ಎಕ್ಸ್’ನಲ್ಲಿ ವಿಜಯೇಂದ್ರರನ್ನು ಪ್ರಶ್ನಿಸಿದ್ದಾರೆ.

‘ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ಪಡೆದುಕೊಳ್ಳುವ ಅವಕಾಶವಿದ್ದಾಗಲೂ ಕೈಚೆಲ್ಲಿದ ಮಹಾನುಭಾವ ಯಾರು ಎಂಬುದು ಇಡೀ ದೇಶ ಹಾಗೂ ಜಗತ್ತಿಗೇ ಬಟಾಬಯಲಾದ ಸತ್ಯ. ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣದ ವಿರೋಧಿ ಎಂದು ಬಿಂಬಿಸುವ ರೀತಿಯಲ್ಲಿ ಮೆರೆದ ತಾವು ಇಂದಿಗೂ ನಿಮ್ಮ ತಂದೆಯ ಹೆಸರಿಲ್ಲದೇ ಚಲಾವಣೆಯಾಗದ ನಾಣ್ಯ ಎಂಬ ಸತ್ಯ ನಮಗಿಂತ ನಿಮ್ಮದೇ ಅಧ್ಯಕ್ಷಗಿರಿ ಸಹಿಸುತ್ತಿರುವ ಬಿಜೆಪಿ ನಿರಾಶ್ರಿತರಿಗೆ ಚೆನ್ನಾಗಿ ಗೊತ್ತಿದೆ.

ಭಾರತದ ಸಾರ್ವಭೌಮತೆಯ ಪ್ರಶ್ನೆ ಬಂದಾಗೆಲ್ಲ ನಾವು ಹಾಗೂ ನಮ್ಮ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರದ ಜೊತೆ ಗಟ್ಟಿಯಾಗಿ ನಿಲ್ಲುತ್ತಲೇ ಬಂದಿದ್ದೇವೆ. ಈ ವಿಷಯದಲ್ಲಿ ನಮ್ಮ ದೇಶದ ವೀರ ಯೋಧೆ ಸೋಫಿಯಾ ಖುರೇಷಿಯವರನ್ನು ಪಾಪಿ ಪಾಕಿಸ್ತಾನಿಗಳೊಂದಿಗೆ ಹೋಲಿಸಿ, ವಿಕೃತವಾಗಿ ಉಡಾಫೆ ಮಾತಾಡುವ ನಿಮ್ಮ ಬಿಜೆಪಿ ಪಕ್ಷದವರಿಂದ ಕಲಿಯುವಂತಹ ಯಾವ ಹರಕತ್ತು ನಮ್ಮ ಕಾಂಗ್ರೆಸ್ ಪಕ್ಷಕ್ಕಿಲ್ಲ’ ಎಂದು ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ.

‘ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವ ಎಲ್ಲ ಶಕ್ತಿ ನಮ್ಮ ರಕ್ಷಣಾ ಪಡೆಗಳಿಗಿದ್ದರೂ ಯಾರದೋ ಅಪ್ಪಣೆಗೆ ತಲೆಬಾಗಿ ಶರಣಾದದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಶತಕೋಟಿ ಭಾರತೀಯರೇ ಪ್ರಧಾನಿ ಮೋದಿ ಅವರನ್ನು ಕೇಳುತ್ತಿದ್ದಾರೆ. ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿ, ನಮ್ಮ ಅಮಾಯಕ ಸಹೋದರಿಯರ ಸಿಂಧೂರ ಅಳಿಸಿದ ಪಾಪಿಗಳನ್ನು ನಿರ್ಮೂಲನೆ ಮಾಡುವುದನ್ನು ಬಿಟ್ಟು ಕದನವಿರಾಮ ಘೋಷಿಸಿದ್ದನ್ನು ನಿಮ್ಮಂತಹ ಅಪ್ಪನ ಹೆಸರನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು ಬದುಕುತ್ತಿರುವವರೆಲ್ಲ ಬಹುಪರಾಕ್ ಹೇಳಿಕೊಂಡು ತಿರುಗುತ್ತಿರುವುದನ್ನು ನೋಡಿದರೆ ಭಾರತೀಯರು ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂಬುದನ್ನು ಮೇಲಿನವರನ್ನು ಮೆಚ್ಚಿಸಲು ಒಟಗುಟ್ಟುವುದನ್ನು ಬಿಟ್ಟು ಅರ್ಥ ಮಾಡಿಕೊಳ್ಳುವುದು ಒಳಿತು’ ಎಂದು ಸಂತೋಷ್ ಲಾಡ್ ಲೇವಡಿ ಮಾಡಿದ್ದರೆ.

‘ಕೊನೆಗೊಂದು ಮಾತು, ಆಪರೇಶನ್ ಸಿಂಧೂರದ ಹೆಸರಲ್ಲಿ ರೀಲ್ಸ್ ಶೋಕಿ ಮಾಡುತ್ತ, ಇಂತಹ ಸೂಕ್ಷ್ಮ ವಿಚಾರವನ್ನು ಸಹ ಚುನಾವಣೆ ಸರಕಾಗಿ ಬಳಸಿಕೊಳ್ಳುವ ನಿಮ್ಮ ಪಕ್ಷದ ನಾಚಿಕೆಗೇಡಿತನಕ್ಕೆ ನಿಮ್ಮ ಬಿಜೆಪಿ ಪಕ್ಷವೇ ಸಾಟಿ ಬಿಡಿ’

-ಸಂತೋಷ್ ಲಾಡ್ ಕಾರ್ಮಿಕ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News