ಸತೀಶ ಜಾರಕಿಹೊಳಿ, ಆಪ್ತರ ನಿವಾಸಗಳ ಮೇಲೆ ಮುಂದುವರೆದ ಈ.ಡಿ. ದಾಳಿ
ಬೆಂಗಳೂರು 0: ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಅವರ ಆಪ್ತರಾದ ಡಾ. ವೈ. ಮಂಜುನಾಥ ಹಾಗೂ ಡಾ. ಗಿರೀಶ್ ಸೋನವಾಲ್ಕರ್ ಅವರ ಬೆಳಗಾವಿಯಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಈ.ಡಿ.) ಅಧಿಕಾರಿಗಳು ಗುರುವಾರವೂ ಶೋಧ ಕಾರ್ಯ ಮುಂದುವರೆಸಿದ್ದು, ಅರೆಸೇನಾ ಪಡೆಯ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಯಿತು.
ಗೋಕಾಕಿನ ಸಚಿವ ಸತೀಶ ಜಾರಕಿಹೊಳಿ ನಿವಾಸ, ಅವರ ಬಾಮೈದ ಅಬಕಾರಿ ಇಲಾಖೆ ಅಪರ ಆಯುಕ್ತ ಡಾ. ವೈ. ಮಂಜುನಾಥ ಬೆಳಗಾವಿ ನಿವಾಸ, ಸತೀಶ ಜಾರಕಿಹೊಳಿ ಆಪ್ತ ಡಾ. ಗಿರೀಶ್ ಸೋನವಾಲ್ಕರ್ ಮನೆಯಲ್ಲಿ ಈ.ಡಿ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ, ಮುಕ್ತಾಯಗೊಳಿಸಲಾಗಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ರಾಜ್ಯಾದ್ಯಂತ ಬೆಂಗಳೂರು, ಬೆಳಗಾವಿ, ಗೋಕಾಕ್ ಸೇರಿ ಒಟ್ಟು 18 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ದಾಳಿ ಮುಂದುವರೆದಿದ್ದು, ಸದ್ಯ ಸತೀಶ ಜಾರಕಿಹೊಳಿ ಬೆಂಗಳೂರಿನಲ್ಲಿದ್ದು, ಗೋಕಾಕಿನಲ್ಲಿ ಅವರ ಪತ್ನಿ ಶಕುಂತಲಾ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಅವರಿಂದ ಈ.ಡಿ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ.