×
Ad

ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು; ಎಐನ ಅನಂತ ಸಾಧ್ಯತೆ ತೆರೆದಿಟ್ಟ ಗೂಗಲ್ ಎಕ್ಸ್‌ನ ಸೆಬಾಸ್ಟಿಯನ್

Update: 2025-02-14 16:50 IST

ಬೆಂಗಳೂರು : ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರಬಹುದು. ಅಂತಹ ಸಾಧ್ಯತೆಯನ್ನು ಎಐ ಹೊತ್ತು ತರಲಿದೆ ಎಂದು ಗೂಗಲ್ ಎಕ್ಸ್ (Google X) ಸಂಸ್ಥೆಯ ಸ್ಥಾಪಕ ಸೆಬಾಸ್ಟಿಯನ್ ಥನ್ ಗುರುವಾರ ಭವಿಷ್ಯ ನುಡಿದರು.

'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ದಲ್ಲಿ ನಡೆದ 'ಪ್ರವರ್ತಕ ಎಐ: ಅಮೋಘ ಕಲ್ಪನೆಯಿಂದ ನೈಜ ಪ್ರಭಾವದವರೆಗೆ' ಗೋಷ್ಠಿಯಲ್ಲಿ ಮಾತನಾಡಿದರು. "ಎಐ ಪ್ರಗತಿಯನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಮೂರು ವರ್ಷಕ್ಕೂ ಮೊದಲು ಚಾಟ್‌ಜಿಪಿಟಿಯನ್ನು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ಎಐ ಸ್ವರೂಪ ಹೇಗಿರುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ. ಸ್ವಯಂಚಾಲಿತ ಕಾರುಗಳು ಎಷ್ಟು ಸ್ವತಂತ್ರವಾಗಿವೆ ಎಂದರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಮ್ಮ ಸಂಪೂರ್ಣ ಸ್ವಯಂಚಾಲಿತ 'ವೇಮೋ' ಕಾರು ಯಾರ ಮೇಲ್ವಿಚಾರಣೆಯೂ ಇಲ್ಲದೆ ಜನರನ್ನು ಓಡಾಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ'' ಎಂದರು. 

ಅನೂಹ್ಯ ಬೆಳವಣಿಗೆ :

ಎಐನ ಆರಂಭಿಕ ದಿನಗಳಲ್ಲಿ ಇದರ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯವಿತ್ತು ಎಂಬ ಪ್ರಶ್ನೆಗೆ, ''ಆರಂಭದಲ್ಲಿ ಎಐ ಕುರಿತು ಜನರಲ್ಲಿ ತುಂಬಾ ಭಯವಿತ್ತು. ಈ ತಂತ್ರಜ್ಞಾನ ಇಡೀ ಮನುಷ್ಯ ಕುಲವನ್ನು ನಾಶ ಮಾಡಿಯೇ ಬಿಡುತ್ತದೆ ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಆದರೆ ಆ ಪರಿಸ್ಥಿತಿ ಈಗಿಲ್ಲ. ಜನರಲ್ಲಿ ಆತಂಕ ಹೋಗಿದೆ. ಎಐ ತಂತ್ರಜ್ಞಾನವನ್ನು ಜನರು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ವ್ಯಾಪಕವಾಗಿ ಅದನ್ನು ಬಳಸುತ್ತಿದ್ದಾರೆ. ಈ ತಂತ್ರಜ್ಞಾನವನ್ನು ಆರಂಭದಲ್ಲಿ ಬರವಣಿಗೆಯ ಮುಂದಿನ ಪದ ಅಥವಾ ವಾಕ್ಯಗಳನ್ನು ಊಹಿಸಲು ಬಳಸಲಾಗುತ್ತಿತ್ತು. ಅದೀಗ ಯಾವುದೇ ವಿಚಾರದ ಬಗ್ಗೆ ಪುಟಗಟ್ಟಲೇ ಸ್ವತಂತ್ರವಾಗಿ ಬರೆಯಬಲ್ಲದಾಗಿದೆ. ಇಷ್ಟು ಅಗಾಧ ಬೆಳವಣಿಗೆಯನ್ನು ಯಾರೂ ಊಹಿಸಿರಲಿಲ್ಲ. ಹೀಗಾಗಿ ಎಐ ತಂತ್ರಜ್ಞಾನ ಅನೂಹ್ಯವಾದುದು'' ಎಂದು ಅಭಿಪ್ರಾಯಪಟ್ಟರು.

ಹೊಸ ಉದ್ಯೋಗಗಳಿಗೆ ಸನ್ನದ್ಧರಾಗಿ :

ಉದ್ಯೋಗ ಕ್ಷೇತ್ರದಲ್ಲಿ ಎಐ ಕುರಿತು ಒಂದು ರೀತಿಯಲ್ಲಿ ಆತಂಕ ಇದೆಯಲ್ಲಾ ಎಂಬ ಪ್ರಶ್ನೆಗೆ, "ಅದು ಸಹಜವೇ. ಆದರೆ ವಾಸ್ತವದಲ್ಲಿ ಎಐ ಉದ್ಯೋಗಿಗಳ ಜೊತೆಯೇ ಸಾಗುತ್ತದೆ. ಹಾಗೆಂದು ಉದ್ಯೋಗ ನಷ್ಟವಾಗುವುದಿಲ್ಲ ಎಂದಲ್ಲ. ಈಗಿರುವ ಸುಮಾರು 60ಶೇ. ಉದ್ಯೋಗಗಳು ಮುಂದಿನ ದಿನಗಳಲ್ಲಿ ಇಲ್ಲವಾಗುತ್ತವೆ. ಆದರೆ ಅದೇ ವೇಳೆಗೆ ಅದಕ್ಕಿಂತ ಹೆಚ್ಚಿನ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಯುವ ಜನತೆ ಸಜ್ಜಾಗಬೇಕು'' ಎಂದು ಸಲಹೆ ನೀಡಿದರು.

ಮೀಟಿಂಗ್‌ಗೆ ನಮ್ಮ ಡಿಜಿಟಲ್ ಟ್ವಿನ್ ಕಳಿಸಬಹುದು :

“ಮುಂದಿನ ದಿನಗಳಲ್ಲಿ ಎಐ ಭಾರೀ ಪಲ್ಲಟ ತರುವುದು ಗ್ಯಾರಂಟಿ. ಸಾರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ವೈಯಕ್ತಿಕರಿಸಿದ ಸೇವೆಗಳಲ್ಲಿ ಇದರ ಬಳಕೆ ಜಾಸ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರಬಹುದು. ಡಿಜಿಟಲ್ ಟ್ವಿನ್ ಮೂಲಕ ನಾವು ಬೇರೆ ಕೆಲಸದಲ್ಲಿದ್ದೂ ಮೀಟಿಂಗ್‌ನಲ್ಲಿ ಭಾಗವಹಿಸಬಹುದು. ಇನ್ನೂ ಅನಂತ ಸಾಧ್ಯತೆಗಳನ್ನು ಎಐ ತೆರೆಯಲಿದೆ,'' ಎಂದು ಭವಿಷ್ಯ ನುಡಿದರು. 'ದಿ ಇಕನಾಮಿಸ್ಟ್'ನ ಗ್ರಾಫಿಕ್ ವಿವರ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಸೆಬಾಸ್ಟಿಯನ್ ಗೋಷ್ಠಿ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News