ರಾಜ್ಯದ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದ ಶಕ್ತಿ ಯೋಜನೆ : ವರದಿ
ಬೆಂಗಳೂರು : ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಮಹಿಳೆಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಸಸ್ಟೈನೇಬಲ್ ಮೊಬಿಲಿಟಿ ನೆಟ್‌ವರ್ಕ್ ಮತ್ತು ನಿಕೋರ್ ಅಸೋಸಿಯೇಟ್ಸ್ ಸಂಸ್ಥೆಗಳು ಸಿದ್ಧಪಡಿಸಿದ ಜಂಟಿ ಅಧ್ಯಯನ ವರದಿಯು ತಿಳಿಸಿದೆ.
ಉಚಿತ ಪ್ರಯಾಣ ಯೋಜನೆಗಳನ್ನು ಹೊಂದಿರುವ ದಿಲ್ಲಿ ಮತ್ತು ಕರ್ನಾಟಕ, ಹೊಂದದಿರುವ ಪಶ್ಚಿಮ ಬಂಗಾಳ ಮತ್ತು ಕೇರಳ ಮತ್ತು ಪ್ರಯಾಣ ದರದಲ್ಲಿ ಶೇ.50 ರಿಯಾಯಿತಿ ಕಲ್ಪಿಸಿರುವ ಮಹಾರಾಷ್ಟ್ರ ರಾಜ್ಯಗಳಲ್ಲಿನ ಒಟ್ಟು ಹತ್ತು ನಗರಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ಇದು ಉಚಿತ ಸಾರ್ವಜನಿಕ ಸಾರಿಗೆ ಯೋಜನೆಯನ್ನು ಕುರಿತಂತೆ ಹಲವು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಮೊದಲ ವಿಶ್ಲೇಷಣಾ ವರದಿಯಾಗಿದ್ದು, ಸಂಸ್ಥೆಗಳು ಶುಕ್ರವಾರದಂದು ವರದಿಯನ್ನು ಬಿಡುಗಡೆ ಮಾಡಿವೆ.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇ.23 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21ರಷ್ಟು ಏರಿಕೆಯಾಗಿದೆ. ರಾಜ್ಯದ ಶಕ್ತಿ ಯೋಜನೆಯ ಮಾದರಿಯಲ್ಲಿಯೇ ಇತರ ರಾಜ್ಯಗಳು ಸರಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ, ಪ್ರಯಾಣ ದರದಲ್ಲಿ ಶೇ.50 ರಿಯಾಯಿತಿ ಮಾದರಿಯ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕರ್ನಾಟಕದ ಸಾಧನೆ ಇತರ ರಾಜ್ಯಗಳನ್ನು ಮೀರಿಸಿದೆ ಎಂದು ವರದಿ ಬಹಿರಂಗ ಪಡಿಸಿದೆ.
ಉಚಿತ ಬಸ್ ಸೇವೆಯಿಂದ ಮಹಿಳೆಯರಿಗೆ ಪ್ರತಿ ತಿಂಗಳು ಶೇ.30ರಿಂದ ಶೇ.50ರವರೆಗೆ ಮಾಸಿಕ ಉಳಿತಾಯ ಸಾಧ್ಯವಾಗುತ್ತಿದೆ. ಈ ಯೋಜನೆಯು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳು, ಉತ್ತಮ ವೇತನ ಮತ್ತು ಉದ್ಯಮಿಗಳಾಗಿ ರೂಪುಗೊಳ್ಳಲು ಉತ್ತಮ ಮಾರುಕಟ್ಟೆಯ ಸೌಲಭ್ಯಗಳನ್ನು ಕಂಡುಕೊಳ್ಳುವ ಮೂಲಕ ಅವರನ್ನು ಸಶಕ್ತರನ್ನಾಗಿಸಿದೆ ಎಂದು ವರದಿಯು ಹೇಳಿದೆ.
ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಲಿಂಗ-ಸಂವೇದನಾಶೀಲ ಸಿಬ್ಬಂದಿ ನಿಯೋಜನೆ ಮಾಡಬೇಕು. ಎಲ್ಲರಿಗೂ ಸುಗಮ, ಕೈಗೆಟುಕುವ ಸಾರಿಗೆಯನ್ನು ಖಾತ್ರಿಪಡಿಸಲು ಮೊದಲ ಮತ್ತು ಕೊನೆಯ ನಿಲ್ದಾಣಗಳ ನಡುವಿನ ಪ್ರಯಾಣವನ್ನು ಉತ್ತಮಗೊಳಿಸಬೇಕು ಎಂದು ವರದಿಯು ಶಿಫಾರಸು ಮಾಡಿದೆ.
ಉಚಿತ ಸಾರಿಗೆ ಸೌಲಭ್ಯದಿಂದ ಮಹಿಳೆಯರು ಸಾಕಷ್ಟು ಅನುಕೂಲತೆಗಳನ್ನು ಪಡೆಯುತ್ತಿದ್ದರೂ, ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಕಡಿಮೆ ಮಹಿಳೆಯರು ಮಾತ್ರ ಪ್ರಯಾಣದ ಸಮಯದಲ್ಲಿ ತಮಗೆ ಸುರಕ್ಷತೆ ಇದೆ ಎಂಬುದಾಗಿ ಹೇಳಿದ್ದಾರೆ. ಕಿರುಕುಳ, ಜನದಟ್ಟಣೆ, ಮತ್ತು ಬಸ್ ಸ್ಟಾಪ್‌ಗಳಲ್ಲಿ ಕಳಪೆ ಬೆಳಕು ಮತ್ತು ಸಿಬ್ಬಂದಿಯ ಕೊರತೆಯು ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ವರದಿಯು ಹೇಳಿದೆ.