‘ಕಾಡುಗೊಲ್ಲ ಪ್ರಮಾಣಪತ್ರ’ ಸಮಸ್ಯೆ ನಿವಾರಣೆಗೆ ಕ್ರಮ : ಸಚಿವ ಶಿವರಾಜ ತಂಗಡಗಿ
ಬೆಂಗಳೂರು : ತುಮಕೂರು, ಚಿತ್ರದುರ್ಗ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಾಡುಗೊಲ್ಲರಿಗೆ ಪ್ರಮಾಣಪತ್ರ ವಿತರಿಸುವಲ್ಲಿ ಸಮಸ್ಯೆಗಳಾಗುತ್ತಿದ್ದು, ಅವುಗಳನ್ನು ನಿವಾರಿಸಲು ಸುಸೂತ್ರವಾಗಿ ಪ್ರಮಾಣಪತ್ರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಿ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿದ್ದು, ನಿಗಮಕ್ಕೆ ಅಗತ್ಯ ಅನುದಾನ ಕಲ್ಪಿಸಲಾಗುವುದು. ಈ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ಇಲಾಖೆ ಅಡಿ ಬರುವ 11 ಅಭಿವೃದ್ಧಿ ನಿಗಮಗಳಿಗೂ ಅಗತ್ಯ ಅನುದಾನವನ್ನು ಮುಂಬರುವ ಬಜೆಟ್ನಲ್ಲಿ ಒದಗಿಸುವಂತೆ ಕೋರಲಾಗಿದೆ ಎಂದರು.
ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸೇರಿಸುವಂತೆ ಎಂಟು ವರ್ಷಗಳ ಹಿಂದೆಯೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಕೆಲ ಸ್ಪಷ್ಟನೆ ಕೇಳಿ ಕಡತ ವಾಪಸ್ ಬಂದಿದೆ. ಈ ಸ್ಪಷ್ಟನೆಗಳಿಗೆ ಸೂಕ್ತ ಉತ್ತರಗಳನ್ನು ಸಮಾಜ ಕಲ್ಯಾಣ ಇಲಾಖೆಯ ಜೊತೆಗೂಡಿ ಒದಗಿಸಲು ಕ್ರಮವಹಿಸಲಾಗುವುದು ಎಂದೂ ಅವರು ಉಲ್ಲೇಖಿಸಿದರು.