×
Ad

ಮೌನಕ್ಕೆ ಜಾರಿದ ಅಲ್ಪಸಂಖ್ಯಾತರ ಆಯೋಗ: ಬಿಜೆಪಿ ಅವಧಿಯ ಅಧ್ಯಕ್ಷನ ವಜಾಗೊಳಿಸಲು ಪಟ್ಟು

Update: 2023-12-26 21:45 IST

ಬೆಂಗಳೂರು: ಮಹಿಳೆಯರನ್ನು ಅವಮಾನಿಸಿ, ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ಜೊತೆಗೆ ಅಸಭ್ಯ ಭಾಷೆಯಲ್ಲಿ ಮಾತನಾಡಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂರನ್ನು ವಜಾಗೊಳಿಸುವಂತೆ ರಾಜ್ಯ ಸರಕಾರಕ್ಕೆ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಆಗ್ರಹಿಸಿದ್ದಾರೆ.

ಉದ್ದೇಶಪೂರಕವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡುವ ಮೂಲಕ ಮತೀಯ ಅಲ್ಪಸಂಖ್ಯಾಂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ. ಈ ಆರೋಪದಡಿ ಅಲ್ಪಸಂಖ್ಯಾತರ ಆಯೋಗ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರಾಗಿ ನೇಮಕವಾದ ಅಬ್ದುಲ್ ಅಝೀಂ ಕಾರಣವಾಗಿದ್ದು, ಈ ಕೂಡಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಸೆಯ್ಯದ್ ಅಶ್ರಫ್ ಒತ್ತಾಯಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅಬ್ದುಲ್ ಅಝೀಂರನ್ನು ಈ ಹಿಂದಿನ ಬಿಜೆಪಿ ಸರಕಾರವೇ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸಿತ್ತು. ಆದರೆ, ಅಂದಿನಿಂದ ಇದುವರೆಗೆ ಯಾವುದೇ ಪರಿಣಾಮಕಾರಿ ಆಗಿ ಕೆಲಸ ಮಾಡಿಲ್ಲ. ಸದ್ಯ ಈಗ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಅಬ್ದುಲ್ ಅಝೀಂ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಇಂತಹ ವ್ಯಕ್ತಿಯನ್ನು ಏಕೆ ಮುಂದುವರೆಸಿದೆ ಎನ್ನುವುದೇ ಆಘಾತ ತಂದಿದೆ ಎಂದು ಅಶ್ರಫ್ ಹೇಳಿದರು.

ಹೋರಾಟಗಾರ ಎ.ಜೆ.ಖಾನ್ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗವನ್ನು ಹಲ್ಲು ಇಲ್ಲದ ಹುಲಿ ಮಾಡಿ ಅಬ್ದುಲ್ ಅಝೀಂರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ, ಈಗ ಸರಕಾರ ಬದಲಾದರೂ ಈತನನ್ನೆ ಮುಂದುವರೆಸಿರುವುದು ಕಾಂಗ್ರೆಸ್ ದಡ್ಡತನ. ಅಲ್ಪಸಂಖ್ಯಾತರ ರಕ್ಷಣೆ ವ್ಯಾಪ್ತಿಯಲ್ಲಿ ಈ ಆಯೋಗಕ್ಕೆ ನೋಟಿಸ್ ನೀಡುವ, ಪ್ರಕರಣ ದಾಖಲಿಸುವ ಅಧಿಕಾರವಿದೆ. ಆದರೂ ಪ್ರಭಾಕರ್ ಭಟ್ ವಿಚಾರದಲ್ಲಿ ಇದುವರೆಗೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಸೇವಾದಳ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ.ಮಾತನಾಡಿ, ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಆಗುವಂತೆ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಗಾಗಲೇ ಅಲ್ಪಸಂಖ್ಯಾತರ ಆಯೋಗ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಹಾಲಿ ಆಯೋಗದ ಅಧ್ಯಕ್ಷ, ಹೇಳಿಕೆ ನೀಡಿರುವ ವ್ಯಕ್ತಿಯ ಸಿದ್ದಾಂತವನ್ನೆ ಒಪ್ಪಿರುವಂತೆ ಇರುವ ಕಾರಣ ಕ್ರಮಕ್ಕೆ ಹಿಂದೇಟು ಹಾಕಿರಬಹುದು. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದಲ್ಲಿಯೂ ಅನೇಕ ಕಾನೂನುವಾದಿಗಳು ಇದ್ದಾರೆ ಅವರನ್ನು ಈ ಹುದ್ದೆಗೆ ಪರಿಗಣಿಸಬೇಕು. ಈ ಸಂಬಂಧ ಕೂಡಲೇ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನದಲ್ಲಿರುವ ಅಬ್ದುಲ್ ಅಝೀಂನನ್ನು ಸರಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸಂರಕ್ಷಣಾ ಸೇನೆ ಅಧ್ಯಕ್ಷ ಮುಬಾರಕ್ ಪಾಷಾ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎಲ್ಲ ನಿಗಮ, ಆಯೋಗಗಳಲ್ಲಿನ ಬಿಜೆಪಿ ಅವಧಿಯಲ್ಲಿನ ಅಧ್ಯಕ್ಷರ ನೇಮಕ ರದ್ದುಗೊಳಿಸಿದ್ದರು. ಆದರೆ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂರನ್ನು ಮಾತ್ರ ವಜಾಗೊಳಿಸಲಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಲಿ. ಇನ್ನೂ, ನಿತ್ಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಯುತ್ತಿರುವ ಕಾಲಘಟ್ಟದಲ್ಲಿ ದುರ್ಬಲ ಅಧ್ಯಕ್ಷನ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News