‘ಎಸ್‍ಐಆರ್’ ಪ್ರಕ್ರಿಯೆ ಆರಂಭದ ಬೆನ್ನಲ್ಲೆ ಅರ್ಹರಿಗೆ ‘ವಾಸ ಪ್ರಮಾಣ ಪತ್ರ’ ವಿತರಣೆಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ
ಬೆಂಗಳೂರು : ಅರ್ಹ ವ್ಯಕ್ತಿಗಳಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ(ಪಿಆರ್‌ಸಿ)ಗಳ ಸುಗಮ ಹಾಗೂ ಕಾಲಬದ್ಧ ವಿತರಣೆಗೆ ಮತ್ತು ಇತರೆ ಸರಕಾರಿ ಪ್ರಮಾಣಪತ್ರಗಳು ಹಾಗೂ ನಾಗರಿಕ ಸೇವೆಗಳ ವಿತರಣೆಗೆ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ನೀಡಿ ರಾಜ್ಯ ಸರಕಾರ ಸೋಮವಾರ ಆದೇಶಿಸಿದೆ.
ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಕಚೇರಿಯಲ್ಲಿ ಕಂಪ್ಯೂಟರ್, ಇಂಟರ್ನೆಟ್, ಮುದ್ರಣ, ಸ್ಕ್ಯಾನಿಂಗ್ ಮತ್ತು ಅಗತ್ಯ ಮೂಲಸೌಕರ್ಯಗಳೊಂದಿಗೆ ಸಹಾಯ ಮತ್ತು ಸೌಲಭ್ಯ ಕೌಂಟರ್ ಸ್ಥಾಪಿಸಬೇಕು. ಅಟಲ್ ಜನಸ್ನೇಹಿ ಕೇಂದ್ರಗಳು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಸಿಎಸ್‍ಸಿಗಳು ಮತ್ತು ಇತರೆ ಅಧಿಕೃತ ಕೇಂದ್ರಗಳು ಅರ್ಜಿಗಳನ್ನು ಪ್ರಕ್ರಿಯೆಗೊಳಿಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್, ಅಟಲ್ ಜನಸ್ನೇಹಿ ಕೇಂದ್ರ ಪೋರ್ಟಲ್ ಅಥವಾ ಸರಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒಗಳು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೌಂಟರ್ ಗಳನ್ನು ಸ್ಥಾಪಿಸಬೇಕು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ನಗರ ಪ್ರದೇಶಗಳಲ್ಲಿ ಕೌಂಟರ್‍ಗಳನ್ನು ಸ್ಥಾಪಿಸಬೇಕು. ಈ ಆದೇಶದಿಂದ ಏಳು ದಿನಗಳೊಳಗೆ ಅಥವಾ ಸರಕಾರ ಅಧಿಸೂಚಿಸುವ ಅವಧಿಯಲ್ಲಿ ಕಾರ್ಯಾರಂಭ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಸಹಾಯ ಮತ್ತು ಸೌಲಭ್ಯ ಕೌಂಟರ್‍ಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಬೇಕು. ಎಲ್ಲ ಅನುಷ್ಠಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಸಹಾಯ ಸೌಲಭ್ಯ ಕೌಂಟರ್‍ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು ಮತ್ತು ಸಕಾಲ ಕಾಲಮಿತಿಯಲ್ಲಿ ಅನುಸರಣೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರವು ಪರಿಶೀಲನೆಯನ್ನು ಸುಗಮಗೊಳಿಸಲು, ದಾಖಲೆಗಳನ್ನು ಸಲ್ಲಿಸುವ ಅಗತ್ಯವನ್ನು ಕಡಿಮೆ ಮಾಡಲು ಮತ್ತು ಈಗಾಗಲೇ ಭರ್ತಿ ಮಾಡಿದ ಆನ್‍ಲೈನ್ ಅರ್ಜಿಗಳನ್ನು ಸಕ್ರಿಯಗೊಳಿಸಲು ಸೀಮಿತ ಉದ್ದೇಶಕ್ಕಾಗಿ, ಕುಟುಂಬ, ಶೈಕ್ಷಣಿಕ ದತ್ತಾಂಶಗಳು, ನಿವಾಸ ದತ್ತಾಂಶಗಳು, ಮತದಾರರ ಪಟ್ಟಿಗಳು ಮತ್ತು ಕಾಲಕಾಲಕ್ಕೆ ಸೂಚಿಸಬಹುದಾದ ಇತರೆ ಸರಕಾರಿ ದತ್ತಾಂಶಗಳು ಸೇರಿದಂತೆ ಅಧಿಕೃತ ಸರಕಾರಿ ದತ್ತಾಂಶಗಳನ್ನು ಬಳಸಿಕೊಳ್ಳಬಹುದು. ಆದರೆ, ಪ್ರಮಾಣಪತ್ರ ನೀಡುವ ಮೊದಲು ಅರ್ಹತೆಯನ್ನು ಸಕ್ಷಮ ಪ್ರಾಧಿಕಾರವು ಸ್ವತಂತ್ರವಾಗಿ ದೃಢೀಕರಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಸರಕಾರದ ಅಪರ ಮುಖ್ಯ ಕಾರ್ಯದರ್ಶಿ/ಸರಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರು ಈ ಯೋಜನೆಯ ಅನುಷ್ಠಾನವನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಎಲ್ಲ ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ವರದಿಗಳನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.