×
Ad

ಕಾಲ್ತುಳಿತದಲ್ಲಿ ಮೃತಪಟ್ಟ ಬಾಲಕಿಯ ಚಿನ್ನಾಭರಣ ಕಳ್ಳತನ ಆರೋಪ : ಪ್ರಕರಣ ದಾಖಲು

Update: 2025-07-24 20:15 IST

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ದಿವ್ಯಾಂಶಿ ಧರಿಸಿದ್ದ ಕಿವಿಯೋಲೆ ಹಾಗೂ ಚಿನ್ನದ ಸರ ಕಳ್ಳತನವಾಗಿರುವ ಆರೋಪದಡಿ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಳ ತಾಯಿ ಅಶ್ವಿನಿ ಎಂಬುವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿಯಾಗಿದ್ದ 13 ವರ್ಷದ ದಿವ್ಯಾಂಶಿ ಕಾಲ್ತುಳಿತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಬಳಿಕ ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮಗಳ ಮೃತದೇಹ ಹಸ್ತಾಂತರಿಸಿದ್ದರು. ಮಗಳು ಧರಿಸಿದ 6 ಗ್ರಾಂ ತೂಕದ ಕಿವಿಯೋಲೆ ಹಾಗೂ 5 ರಿಂದ 6 ಗ್ರಾಂ ತೂಕದ ಚಿನ್ನದ ಸರ ನೀಡಿಲ್ಲ. ಈ ಬಗ್ಗೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಶವ ಪರೀಕ್ಷೆ ವೇಳೆ ಯಾರೋ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕಿಯ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆ ವೇಳೆ ಶವಗಾರದಲ್ಲಿ ನನ್ನ ಮಗಳ ಕಿವಿಯೋಲೆ ಹಾಗೂ ಚಿನ್ನದ ಸರ ಕಾಣೆಯಾಗಿದೆ. ಮಗಳ ಹುಟ್ಟುಹಬ್ಬ ದಿನದಂದು ಆಕೆಯ ಮಾವ ಉಡುಗೊರೆ ನೀಡಿದ್ದರು. ಕಿವಿಯೋಲೆಯೊಂದಿಗೆ ನನ್ನ ಮಗಳು ಹೆಚ್ಚಿನ ಬಾಂಧವ್ಯ ಹೊಂದಿದ್ದಳು. ಒಂದೂವರೆ ವರ್ಷದಿಂದ ಕಿವಿಯೋಲೆ ಬಿಚ್ಚಿರಲಿಲ್ಲ. ಹೀಗಾಗಿ ನನಗೆ ಆಭರಣ ಬೇಕೆಂದು ಬೌರಿಂಗ್ ಆಸ್ಪತ್ರೆಗೆ ತೆರಳಿ ಕೇಳಿದಾಗ, ಈ ಬಗ್ಗೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ದಿವ್ಯಾಂಶಿಯನ್ನು ಶವಾಗಾರಕ್ಕೆ ಕರೆದೊಯ್ಯುವಾಗ ಕಿವಿಯೋಲೆ ಇತ್ತು. ಪರೀಕ್ಷೆ ಮುಗಿಸಿ ಶವ ಹೊರತಂದಾಗ ಆಭರಣ ಇರಲಿಲ್ಲ. ಆಭರಣ ಜೊತೆ ನನ್ನ ಮಗಳು ಭಾವನಾತ್ಮಕ ಸಂಬಂಧ ಹೊಂದಿದ್ದಳು. ಹೀಗಾಗಿ ಅದನ್ನು ಕೇಳುತ್ತಿದ್ದೇನೆ. ಸದ್ಯ ಶವಾಗಾರದ ಇನ್‍ಚಾರ್ಜ್ ವಿರುದ್ಧ ದೂರು ನೀಡಿದ್ದೇನೆ ಎಂದು ಅಶ್ವಿನಿ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News