×
Ad

ಸಂವಿಧಾನ ತಿದ್ದುಪಡಿ ಕುರಿತು ಉಪ ರಾಷ್ಟ್ರಪತಿಯಿಂದ ತಪ್ಪು ಅಭಿಪ್ರಾಯ ರೂಪಿಸುವ ಹೇಳಿಕೆ: ಬಿ.ಕೆ.ಹರಿಪ್ರಸಾದ್

Update: 2025-06-29 15:33 IST

ಬೆಂಗಳೂರು: ದೇಶದಲ್ಲಿ ಅತ್ಯಂತ ಕಾನೂನುಬದ್ದವಾಗಿ ನಡೆದಿರುವ ಸಂವಿಧಾನ ತಿದ್ದುಪಡಿ ಪ್ರಕ್ರಿಯೆಯ ಕುರಿತು ದೇಶದ ಅತ್ಯುನ್ನತ ಸಾಂವಿಧಾನಿಕ ಪದವಿಯಲ್ಲಿರುವ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಸುಳ್ಳು ಹೇಳಿರುವುದು ಆಘಾತಕಾರಿ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರು, ಹರ್ಯಾಣ ಕಾಂಗ್ರೆಸ್ ನ ಎಐಸಿಸಿ ಉಸ್ತುವಾರಿಯೂ ಆಗಿರುವ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಸಂವಿಧಾನದ ಪೀಠಿಕೆಯನ್ನು ಬದಲಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಸಂವಿಧಾನದ ಬೀಜವಾಗಿದೆ ಮತ್ತು ಅದರ ಮೇಲೆಯೇ ಸಂವಿಧಾನವು ಬೆಳೆದಿದೆ. ಪೀಠಿಕೆಯಲ್ಲಿನ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾಗಿತ್ತು ಮತ್ತು ಅವು ಎಂದೂ ಅಂಬೇಡ್ಕರ್ ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ ಧನ್ಕರ್ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತಾವನೆಯು ಸಂವಿಧಾನದ ಒಂದು ಭಾಗ. ಸಂವಿಧಾನದ 368ನೇ ವಿಧಿಯು ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತೆ ಯಾವುದೇ ತಿದ್ದುಪಡಿ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದೆ. ಈ ಪ್ರಕರಣವನ್ನು ಬಳಸಿಕೊಂಡು ಉಪ ರಾಷ್ಟ್ರಪತಿಯವರು ಸಂವಿಧಾನ ತಿದ್ದುಪಡಿ ಕುರಿತು ತಪ್ಪು ಅಭಿಪ್ರಾಯ ರೂಪಿಸುವಂತಹ ಮಾತನ್ನಾಡಿದ್ದಾರೆ. ಪ್ರಸ್ತಾವನೆಯು ಸಂವಿಧಾನದ ಭಾಗವಾಗಿದ್ದರೂ, ಸಂವಿಧಾನದ ಇತರ ಭಾಗಗಳಂತೆ ಪ್ರಸ್ತಾವನೆಯನ್ನೂ ತಿದ್ದುಪಡಿ ಮಾಡಬಹುದು ಎಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಮೂರು ಪದಗಳ ಸೇರ್ಪಡೆ:

1976ರಲ್ಲಿ 42ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ತಿದ್ದುಪಡಿ ತರಲಾಯಿತು. ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಿದ ಏಕೈಕ ಪ್ರಕರಣವಿದು. ಇಂದಿರಾ ಗಾಂಧಿಯವರು 42ನೇ ಸಂವಿಧಾನದ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಮೂರು ಪದಗಳನ್ನು ಸೇರಿಸಿದರು. ಈ ಪದಗಳು ಅತ್ಯಂತ ಮಹತ್ವಪೂರ್ಣವಾದುವು ಮತ್ತು ಸಾರ್ವಕಾಲಿಕವಾಗಿ ಪ್ರಾಮುಖ್ಯತೆ ಪಡೆದಿವೆ ಎಂದವರು ಹೇಳಿದ್ದಾರೆ.

42ನೇ ತಿದ್ದುಪಡಿಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದ ಪದಗಳೆಂದರೆ- ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ. ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿ ಸಮಾಜವಾದಿ ಎಂಬ ಪದವು ಸಂವಿಧಾನವನ್ನು ಸೇರಿಕೊಂಡಿತು. ಸಂವಿಧಾನದ 15(1 ಮತ್ತು2), 29 ಮತ್ತು 30ನೇ ವಿಧಿಗಳಲ್ಲಿ ಜಾತ್ಯತೀತೆಯು ವ್ಯಾಪಿಸಿಕೊಂಡಿದೆ ಎಂದವರು ಪ್ರತಿಪಾದಿಸಿದ್ದಾರೆ.

ಆತ್ಮಕ್ಕೆ ದೇಹ ನೀಡಿರುವುದು:

ಇಂದಿರಾ ಗಾಂಧಿಯವರು ಈ ತಿದ್ದುಪಡಿ ಮೂಲಕ ಸಂವಿಧಾನದ ಆತ್ಮಕ್ಕೆ ದೇಹದ ಸ್ವರೂಪವೊಂದನ್ನು ನೀಡಿದರು ಎಂದು ಹೇಳಿರುವ ಬಿ.ಕೆ.ಹರಿಪ್ರಸಾದ್, ಸಂವಿಧಾನದ ಅತ್ಯುನ್ನತ ಮೌಲ್ಯಗಳಾದ ಸಮಾಜವಾದ, ಜಾತ್ಯತೀತ ಮತ್ತು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಮೌಲ್ಯಗಳು ಆಗ ಒಂದು ಸ್ಪಷ್ಟ ಸ್ವರೂಪವನ್ನು ಪಡೆದುಕೊಂಡವು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಪ್ರಾಮುಖ್ಯತೆ ನೀಡುವುದರ ಬಗ್ಗೆ ದೇಶ-ವಿರೋಧಿಗಳಿಗೆ ಮಾತ್ರವೇ ಯಾವಾಗಲೂ ಭಯವಿರುತ್ತದೆ ಎಂದರು.

ನಮ್ಮ ಸಂವಿಧಾನದ ಅಂತರ್ಯದಲ್ಲಿ ಏನೆಲ್ಲಾ ಅಡಕವಾಗಿತ್ತೋ ಅದನ್ನು ಇನ್ನಷ್ಟು ಸ್ಪಷ್ಟವಾಗಿ ತೆರೆದಿಡುವ ಕೆಲಸ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಆಯಿತು. 42ನೇ ತಿದ್ದುಪಡಿಯ ಬಳಿಕ ಸಂವಿಧಾನದ ಪ್ರಸ್ತಾವನೆಯು, "ಭಾರತವು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಗಣರಾಜ್ಯ' ಎಂದು ಸಾರಿತು. ಇದರಲ್ಲಿ ಏನು ತಪ್ಪಿದೆ? ದೇಶದ ಯಾವುದೇ ಸಾಮಾನ್ಯ ನಾಗರಿಕರಿಗೆ ಈ ವಿಚಾರದಲ್ಲಿ ತಕರಾರು ಇಲ್ಲ. ಸಮಾಜವಾದ ಮತ್ತು ಜಾತ್ಯತೀತತೆಯ ವಿರುದ್ಧ ಇರುವವರಿಗಷ್ಟೇ ತಕರಾರುಗಳು ಇರಬಹುದು ಎಂದವರು ಟೀಕಿಸಿದರು.

ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ:

ದೇಶದ ಏಕತೆ ಮತ್ತು ಸಮಗ್ರತೆಗೆ ವಿರೋಧಿಗಳಿಂದ ಅಪಾಯ ಎದುರಾಗಿದ್ದ ಕಾರಣದಲ್ಲಿ ಆ ಸಂದರ್ಭದಲ್ಲಿ ಸಂವಿಧಾನದಲ್ಲಿನ ತುರ್ತು ಪರಿಸ್ಥಿತಿ ಹೇರಿಕೆಯ ಅಧಿಕಾರವನ್ನು ಬಳಸಿಕೊಳ್ಳಲಾಗಿತ್ತು. ದೇಶದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದಕ್ಕಾಗಿಯೇ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಆಗ ರಾಷ್ಟ್ರ ವಿರೋಧಿಗಳು ತಮ್ಮ ಗುರಿ ಸಾಧನೆಗಾಗಿ ಪ್ರಜಾತಂತ್ರ ವಿರೋಧಿ ಮತ್ತು ಸಂವಿಧಾನ ವಿರೋಧಿ ಮಾರ್ಗಗಳನ್ನು ಅನುಸರಿಸುವ ಕೆಲಸಕ್ಕೆ ಕೈ ಹಾಕಿದ್ದರು ಎಂದು ವಿವರಿಸಿದ ಹರಿಪ್ರಸಾದ್, ಅಂತಹ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

1) ಕೇಂದ್ರ ರೈಲ್ವೆ ಸಚಿವ ಲಲಿತ್ ನಾರಾಯಣ್ ಮಿಶ್ರಾ ಅವರ ಹತ್ಯೆ.

2) ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಎ.ಎನ್. ರೇ ಅವರ ಹತ್ಯೆ ಯತ್ನ.

3) ಗುಜರಾತ್ ಮತ್ತು ಬಿಹಾರದಲ್ಲಿ ಕಾನೂನುಬದ್ದವಾಗಿ ಆಯ್ಕೆಯಾಗಿದ್ದ ಶಾಸಕರ ಮೇಲೆ ಒತ್ತಡ ಹೇರಿ, ಬೆದರಿಕೆ ಹಾಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಎರಡೂ ರಾಜ್ಯಗಳ ವಿಧಾನಸಭೆಗಳ ವಿಸರ್ಜನೆಗೆ ಪ್ರಯತ್ನ.

4) ಬರೋಡಾದಲ್ಲಿ ಡೈನಾಮೈಟ್ ಸ್ಫೋಟಿಸಿ ಸರಕಾರಿ ಮೂಲಸೌಕರ್ಯಗಳು ಮತ್ತು ರೈಲ್ವೆ ಸೇತುವೆಗಳಿಗೆ ಹಾನಿಗೊಳಿಸಲು ಸಂಚು,

5) ಅತ್ಯಂತ ದೇಶಪ್ರೇಮದಿಂದ ಕಾರ್ಯನಿರ್ವಹಿಸುವ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ದೇಶದ ವಿರುದ್ಧವೇ ಎತ್ತಿಕಟ್ಟುವ ಪ್ರಯತ್ನದಂತಹ ದೇಶದ್ರೋಹದ ಕೆಲಸವೂ ನಡೆಯಿತು.

6) 1974ರ ಮೇ ತಿಂಗಳಲ್ಲಿ ರೈಲ್ವೆ ಮುಷ್ಕರದ ಮೂಲಕ ರಾಷ್ಟ್ರದ ಜನಜೀವನ ಮತ್ತು ರಾಷ್ಟ್ರೀಯ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುವ ಯತ್ನ.

7) ದೇಶದಲ್ಲಿ ಆಡಳಿತಕ್ಕೆ ತಡೆಯೊಡ್ಡುವ ಘೋಷಣೆಯೊಂದಿಗೆ ಪ್ರಧಾನಿಯವರ ನಿವಾಸ ಮತ್ತು ಸಂಸತ್ತಿಗೆ ಮುತ್ತಿಗೆ ಹಾಕುವ ಪ್ರಯತ್ನ.

8) ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಕಾನೂನಾತ್ಮಕ ಪರಿಹಾರ ಪಡೆಯಲು ಪ್ರಧಾನಿಯವರಿಗೆ ತಡೆಯೊಡ್ಡಲಾಯಿತು. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು 14 ದಿನಗಳ ಕಾಲ ತಡೆಹಿಡಿದು 1975ರ ಜೂನ್ 12ರಂದು ತೀರ್ಪು ನೀಡಿತ್ತು. 1975ರ ಜೂನ್ 24ರಂದು ಸುಪ್ರೀಂ ಕೋರ್ಟ್ ಕೂಡ ತಡೆಯಾಜ್ಞೆ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪು ಮತ್ತು ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ ವಿರೋಧ ಪಕ್ಷಗಳು, ಕಾನೂನನ್ನೇ ತಮ್ಮ ಕೈಗೆ ತೆಗೆದುಕೊಂಡಿದ್ದವು.

9)ವಿರೋಧ ಪಕ್ಷಗಳು ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಶಾಂತಿಯುತವಾಗಿ ಸರಕಾರ ಬದಲಾವಣೆ ಮಾಡುವ ವಿಧಾನವನ್ನು ಬಿಟ್ಟು ಬೀದಿಯಲ್ಲಿ ಸಮರಕ್ಕೆ ಇಳಿದವು.

10) 1971ರ ಸಂಸತ್ ಚುನಾವಣೆ ಬಳಿಕ 1976ರಲ್ಲಿ ಚುನಾವಣೆ ನಡೆಯಬೇಕಿತ್ತು. ಆಗಿನ ಸಂದರ್ಭದಲ್ಲಿ ಇನ್ನೂ ಆರು ತಿಂಗಳು ಕಾದು ವಿರೋಧ ಪಕ್ಷಗಳು ತಮ್ಮ ಹೋರಾಟವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿತ್ತು. ಆದರೆ, ಆಗ ವಿರೋಧ ಪಕ್ಷಗಳು ಪ್ರಜಾಸತ್ತಾತ್ಮಕಾಗಿ ಚುನಾಯಿತವಾಗಿದ್ದ ಸರಕಾರವನ್ನು ಕಿತ್ತುಹಾಕಲು ಪ್ರಜಾತಂತ್ರ ವಿರೋಧಿ ಮತ್ತು ಸಂವಿಧಾನ ವಿರೋಧಿ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡವು. ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಇಂಥಹ ಪ್ರಯತ್ನಗಳನ್ನು ನೋಡಿಕೊಂಡು ಅಧಿಕಾರದಲ್ಲಿರುವ ಯಾವ ಸರಕಾರವೂ ಕೈಕಟ್ಟಿ ಕೂರುವುದಿಲ್ಲ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಸನ್ನಿವೇಶವನ್ನು ಅಸಾಂವಿಧಾನಿಕ ಎಂದು ತಪ್ಪಾಗಿ ಬಿಂಬಿಸಲು ಇವರೆಲ್ಲರೂ ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ದೇಶದ ಏಕತೆ ಮತ್ತು ಸಮಗ್ರತೆಗೆ, ಸಾರ್ವಭೌಮತೆಗೆ ಧಕ್ಕೆ ಎದುರಾದಾಗ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಅಧಿಕಾರವನ್ನು ಸಂವಿಧಾನವೇ ನೀಡಿದೆ ಎಂಬ ಸತ್ಯವನ್ನು ಮರೆಮಾಚಲು ಇವರೆಲ್ಲರೂ ಯತ್ನಿಸುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ದೇಶದ ಹೊರಗಿನ ಶತ್ರುಗಳು ದೇಶದ ಮೇಲೆ ದಾಳಿ ಮಾಡಿದಾಗ ಅಥವಾ ದೇಶದ ಒಳಗಿರುವ ರಾಷ್ಟ್ರವಿರೋಧಿ ಶಕ್ತಿಗಳು ದಂಗೆ ಏಳುವ ಸನ್ನಿವೇಶ ಇದ್ದಾಗ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸುವ ಮೂಲಕ ದೇಶದ ಸಾರ್ವಭೌಮತೆಯನ್ನು ರಕ್ಷಿಸಬಹುದು ಎಂದು ಭಾರತದ ಸಂವಿಧಾನದ 352ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ. ಅದೇ ಅಧಿಕಾರವನ್ನು ಇಂದಿರಾ ಗಾಂಧಿಯವರ ನೇತೃತ್ವದ ಸರಕಾರವು ಸಾಂವಿಧಾನಿಕವಾಗಿಯೇ ಬಳಕೆ ಮಾಡಿತ್ತು. ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದು ಅಸಾಂವಿಧಾನಿಕ ಎನ್ನುವುದು ನಮ್ಮ ಸಂವಿಧಾನವನ್ನೇ ನಿರಾಕರಿಸಿದಂತೆ ಎಂದವರು ಹೇಳಿದ್ದಾರೆ.

ಏಕತೆ ಮತ್ತು ಸಮಗ್ರತೆ ಏಕೆ?:

ಸಂವಿಧಾನದ ಪ್ರಸ್ತಾವನೆಯಲ್ಲಿದ್ದ ರಾಷ್ಟ್ರದ ಏಕತೆ ಎಂಬ ಪದವನ್ನು ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಎಂದು ಇಂದಿರಾ ಗಾಂಧಿಯವರು ಬದಲಾವಣೆ ಮಾಡಿದ್ದರ ಹಿಂದೆ ಮಹತ್ತರವಾದ ಸದುದ್ದೇಶವಿತ್ತು. ದೇಶದ ಏಕತೆ ಮತ್ತು ಸಮಗ್ರತೆಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿ, ಅದೇ ಕಾರಣಕ್ಕಾಗಿ ಹುತಾತ್ಮರಾದವರಿಗೆ ಮಾತ್ರ ದೇಶದ ಏಕತೆ ಮತ್ತು ಸಮಗ್ರತೆಯ ಮಹತ್ವದ ಅರಿವಾಗಲು ಸಾಧ್ಯ. ಭಾಷಾ ಸಂಬಂಧಿ ಗಲಭೆಗಳಿಂದ ಆರಂಭವಾಗಿ, 1966ರ ಗೋ ಚಳವಳಿ, ದೇಶದ ವಿವಿಧೆಡೆ ಆರಂಭವಾದ ಪ್ರತ್ಯೇಕತಾವಾದಿ ಚಳವಳಿ, ಸರ್ಕಾರಿ ಮೂಲಸೌಕರ್ಯಗಳ ನಾಶಕ್ಕಾಗಿ ನಡೆದ ಬರೋಡಾ ಡೈನಾಮೈಟ್ ಸ್ಫೋಟದ ಸಂಚು, ಎಲ್ಲಕ್ಕಿಂತಲೂ ಮುಖ್ಯವಾಗಿ 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರ ಪ್ರಾಣವನ್ನೇ ಬಲಿ ಪಡೆದ ಖಾಲಿಸ್ತಾನ ಚಳವಳಿ- ಹೀಗೆ ಇಂದಿರಾ ಗಾಂಧಿಯವರು ತನ್ನ ರಾಜಕೀಯ ಜೀವನದುದ್ದಕ್ಕೂ ದೇಶದ ಏಕತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಹಲವು ಸವಾಲುಗಳನ್ನು ಎದುರಿಸಿಕೊಂಡು ಬಂದರು ಎಂದು ವಿವರಿಸಿದರು.

ಮೈಖೇಲ್ ಫೂಟ್ ಅವರಿಂದ ಶ್ಲಾಘನೆ:

1966ರಿಂದ 1977ರ ನಡುವಿನ ಸಂಘರ್ಷಪೀಡಿತ ಅವಧಿಯಲ್ಲಿ ಭಾರತವು ಒಂದಾಗಿ ಉಳಿದಿದ್ದರೆ ಅದರ ಸಂಪೂರ್ಣ ಯಶಸ್ಸಿನ ಕೀರ್ತಿ ಇಂದಿರಾ ಗಾಂಧಿಯವರಿಗೇ ಸಲ್ಲಬೇಕು ಎಂದು ಬ್ರಿಟನ್ನ ಮಾಜಿ ಉಪ ಪ್ರಧಾನಿ, ಲೇಬರ್ ಪಕ್ಷದ ನಾಯಕ ಮೈಖೇಲ್ ಫೂಟ್ ಶ್ಲಾಘಿಸಿದ್ದರು. ಇದು ಇಂದಿರಾ ಗಾಂಧಿಯವರಿಗೆ ದೊರೆತ ಅತ್ಯುನ್ನತ ಗೌರವ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News