ದಸಂಸ ಮನುಷ್ಯತ್ವದ ಪರ ಹೋರಾಡಿದೆ : ಸುಬ್ಬು ಹೊಲೆಯಾರ್
ಬೆಂಗಳೂರು : ರಾಜ್ಯದಲ್ಲಿ ಅನೇಕ ಚಳವಳಿಗಳು ಬಂದು ಹೋಗಿವೆ. ವಚನ ಸಾಹಿತ್ಯದ ನಂತರ ಕಮ್ಯುನಿಸ್ಟರನ್ನು ಹೊರತು ಪಡಿಸಿದರೆ, ದಲಿತ ಸಂಘರ್ಷ ಸಮಿತಿ ಒಂದೇ ಮನುಷ್ಯತ್ವದ ಪರವಾಗಿ ಹೋರಾಡಿದ್ದು ಎಂದು ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಎದುರಿಗೆ ದಸಂಸ ವತಿಯಿಂದ ‘ಸಂವಿಧಾನ ಉಳಿಸಿ, ಅಸಮಾನತೆ ಅಳಿಸಿ’ ಎಂಬ ಘೋಷ ವಾಕ್ಯದಡಿ ಆಯೋಜಿಸಿದ್ದ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿ.6ರಂದು ಬೆಳಕು ಹಾರಿ ಹೋಗಿದ್ದಲ್ಲ, ಅದು ಬೆಳಕು ಮತ್ತೊಮ್ಮೆ ಉಜ್ವಲವಾಗಿ ಬೆಳಗಿದ್ದು ಎಂದು ಭಾವಿಸುತ್ತೇನೆ ಎಂದರು.
ಅಂಬೇಡ್ಕರ್ ಅಸಮಾನತೆ ಅಳಿಸಲು ಸಂವಿಧಾನದ ಬೆಳಕನ್ನು ಕೊಟ್ಟಿದ್ದಾರೆ. ಅವರು ಒಂದು ಜಾತಿ, ಸಮುದಾಯಕ್ಕೆ ಮೀಸಲಾಗದೇ ಎಲ್ಲರ ಹೃದಯಗಳನ್ನು ಮಿಡಯುವ ಹಾಗೆ ದೇಶಕ್ಕೆ ಉತ್ತಮವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ನಮ್ಮನ್ನು ಅಗಲಿಲ್ಲ, ಮತ್ತಷ್ಟು ಎಚ್ಚರವಾಗಿರಿ ಎಂದು ಹೇಳಿ ಹೋಗಿದ್ದಾರೆ. ಅವರು ಬದುಕಿನುದ್ದಕ್ಕು ನಮ್ಮ ಪರವಾಗಿ ಎಚ್ಚರವಾಗಿದ್ದರು. ಇದೀಗ ನಾವೆಲ್ಲ ಅವರಷ್ಟೇ ಜಾಗೃತರಾಗಬೇಕಿದೆ. ಅಸಮಾನತೆಯನ್ನು ಅಳಿಸಲು ನಾವೆಲ್ಲರೂ ಸನ್ನದ್ದರಾಗಬೇಕಿದೆ. ದಸಂಸ ರಾಜ್ಯದ ಚಳವಳಿಗಳ ತಾಯಿ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ಮಾತನಾಡಿದರು. ದಸಂಸ ಹೋರಾಟಗಾರರಾದ ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ, ಶ್ರೀರಾಮ್, ನಿರ್ಮಲಾ, ಪುರುಷೋತ್ತಮ ದಾಸ್, ಬಾಲಕೃಷ್ಣ, ವಕೀಲ ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.