×
Ad

Bengaluru | ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ರೂ.ಹಣ ಎಗರಿಸಿದ ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಎಫ್‍ಐಆರ್ ದಾಖಲು

Update: 2025-12-06 22:01 IST

ಬೆಂಗಳೂರು : ಸೈಬರ್ ವಂಚನೆ ಪ್ರಕರಣವೊಂದರ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ರೂ. ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್ ಅನ್ನು ತೆಗೆದುಕೊಂಡು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಹೆಡ್‍ಕಾನ್‍ಸ್ಟೇಬಲ್ ಜಬೀವುಲ್ಲಾ ಎಂಬಾತನ ವಿರುದ್ಧ ಸೈಬರ್ ಅಪರಾಧ ಠಾಣೆಯ ಇನ್‍ಸ್ಪೆಕ್ಟರ್‍ವೊಬ್ಬರು ನೀಡಿದ ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವಪೊಲೀಸರು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸೈಬರ್ ಕ್ರೈಂ ಠಾಣೆಯ ಪೊಲೀಸರು ಪ್ರಕರಣವೊಂದರ ಸಂಬಂಧ ಕುಶಾಲ್ ನಾರಾಯಣ ಸೋನಿ ಎಂಬಾತನನ್ನು ಬಂಧಿಸಿದ್ದರು. ತದ ನಂತರದಲ್ಲಿ ಜಾಮೀನಿನ ಮೇಲೆ ಅವರು ಹೊರ ಬಂದಿದ್ದು, ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ತನ್ನ ಕಾರಿನೊಳಗೆ ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ಗಮನಿಸಿ ಸೈಬರ್ ಅಪರಾಧ ವಿಭಾಗದ ಡಿಸಿಪಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ಅಧಿಕಾರಿಗಳು ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ಕೈಗೊಂಡಾಗ ಸೈಬರ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಜಬೀವುಲ್ಲಾ ಎಂಬಾತ ಕಾರಿನಲ್ಲಿದ್ದ ಬ್ಯಾಗನ್ನು ಯಾರ ಗಮನಕ್ಕೂ ತರದೆ ಮನೆಗೆ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.

ತಕ್ಷಣ ಹೆಡ್‍ಕಾನ್‍ಸ್ಟೇಬಲ್ ಜಬೀವುಲ್ಲಾನನ್ನು ಕರೆಸಿ ವಿಚಾರಿಸಿದಾಗ ಆ ಬ್ಯಾಗನ್ನು ಮನೆಯಲ್ಲಿಟ್ಟಿರುವುದಾಗಿ ಹೇಳಿದ್ದಾರೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಎಚ್ಚೆತ್ತುಕೊಂಡು ಆ ಬ್ಯಾಗನ್ನು ತಂದು ಕುಶಾಲ್ ನಾರಾಯಣ ಸೋನಿ ಅವರಿಗೆ ಕೊಟ್ಟಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News