×
Ad

ಯುಜಿ ವೈದ್ಯಕೀಯ : 3ನೇ ಸುತ್ತಿನ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ

Update: 2025-12-06 23:25 IST

ಬೆಂಗಳೂರು : ಹೈಕೋರ್ಟ್ ಆದೇಶದ ಪ್ರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ನ 3ನೆ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ.

ಅ.24ರಂದು ಕೆಇಎ ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶವನ್ನು ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ. ಪರಿಷ್ಕೃತ ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ಗಂಟೆಯೊಳಗೆ ಇ-ಮೇಲ್(keauthority-ka@nic.in) ಮೂಲಕ ಕಳುಹಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಡಿ.8ರಂದು ಬೆಳಗ್ಗೆ 11ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.10ರೊಳಗೆ ಶುಲ್ಕ ಪಾವತಿಸಬೇಕು(ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸುವ ಮೂಲಕ). ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡು, ಡಿ.11ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಇಚ್ಚೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಸಂಬಂಧಪಟ್ಟ ಕಾಲೇಜಿಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಸನ್ನ ಹೇಳಿದ್ದಾರೆ.

3ನೆ ಸುತ್ತಿಗೆ ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗಿದೆ. 443 ಸೀಟುಗಳನ್ನು ಪಡೆದ ಅಭ್ಯರ್ಥಿಗಳಲ್ಲಿ ಒಟ್ಟು 301 ಅಭ್ಯರ್ಥಿಗಳು, ಈಗಾಗಲೆ ಎಂಬಿಬಿಎಸ್ ಸೀಟನ್ನು ಮೊದಲ ಮತ್ತು ಎರಡನೆ ಸುತ್ತಿನಲ್ಲಿ ಪಡೆದವರಾಗಿದ್ದು, ಅವರಿಂದ ತೆರವಾಗುವ 301 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಮೂರನೆ ಸುತ್ತಿನ ಆರಂಭದಲ್ಲಿ ಇದ್ದ ಸೀಟು ಹಾಗೂ ಡಿ.5ರವರೆಗೆ ವಿವಿಧ ಕಾರಣಗಳಿಂದ ರದ್ದುಪಡಿಸಿಕೊಂಡಿರುವ ಸೀಟು ಹಾಗೂ ಮೇಲಿನ ಕ್ರಮದ ಸೀಟು ಹಂಚಿಕೆ ನಂತರ ಉಳಿಕೆಯಾಗುವ ಸೀಟುಗಳನ್ನು ನಿಯಮಾನುಸಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News