ಕಬ್ಬು ಬೆಳೆಗಾರರ ಪ್ರತಿಭಟನೆ | ಸಾರ್ವಜನಿಕರ ಜೀವ, ಆಸ್ತಿ ನಷ್ಟವಾಗದಂತೆ ಎಚ್ಚರ ವಹಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು: ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹಾಗೂ ಕನಿಷ್ಠ ಮಾರಾಟ ಬೆಲೆಹೆಚ್ಚಳಕ್ಕಾಗಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದಿಂದ ಸಾರ್ವಜನಿಕರ ಆಸ್ತಿ ಹಾಗೂ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ನಿವಾಸಿಗಳು ರೈತರ ಪ್ರತಿಭಟನೆಯಿಂದ ದಿನನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿದೆ ಎಂದು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರವಾಗಿ ಪಿ.ಪಿ.ಹೆಗಡೆ ವಾದ ಮಾಡಿ ರೈತರ ಪ್ರತಿಭಟನೆಯಿಂದಾಗಿ ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ನಿವಾಸಿಗಳು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಸರಕಾರಿ ವಕೀಲರು ಸರ್ಕಾರದ ಪರವಾಗಿ ಹಾಜರಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನ್ಯಾಯಪೀಠ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಗೆ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿ, ಜೀವಕ್ಕೆ ಹಾನಿಯಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು