×
Ad

ಭಾರತದ ಚುನಾವಣಾ ವಿಧಾನವನ್ನೆ ನಾಶ ಮಾಡುತ್ತಿರುವ ಆಯೋಗ : ಸುರ್ಜೆವಾಲಾ ಆಕ್ರೋಶ

Update: 2025-08-07 21:25 IST

ರಣದೀಪ ಸುರ್ಜೆವಾಲಾ | PC : PTI

ಬೆಂಗಳೂರು : ಚುನಾವಣಾ ಆಯೋಗ ಇನ್ನು ಮುಂದೆ ಕಾವಲುಗಾರನಲ್ಲ, ಬದಲಾಗಿ 'ಭಾರತದ ಚುನಾವಣಾ ವಿಧಾನವನ್ನೆ ನಾಶ ಮಾಡುತ್ತಿರುವ ಆಯೋಗ'. ಚುನಾವಣಾ ವ್ಯವಸ್ಥೆಯನ್ನು ರಕ್ಷಣೆ ಮಾಡುವ ಕೆಲಸ ಬಿಟ್ಟು ಬಿಜೆಪಿಯ ಚುನಾವಣಾ ಫಲಿತಾಂಶಗಳನ್ನು ರಕ್ಷಿಸುವ ಆಯೋಗವಾಗಿ ಬದಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಒಬ್ಬ ವ್ಯಕ್ತಿ-ಒಂದು ಮತ' ಎನ್ನುವ ಪ್ರಜಾಪ್ರಭುತ್ವದ ಮೂಲ ತತ್ವದ ಮೇಲೆ ಬಿಜೆಪಿ ಮತ್ತು ಚುನಾವಣಾ ಆಯೋಗವು ಯೋಜಿತ ದಾಳಿ ಮಾಡಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವ್ಯವಸ್ಥೆಯ ಮೇಲೆ ನಡೆದ ಲಜ್ಜೆಗೆಟ್ಟ ದಾಳಿಯಾಗಿದೆ ಎಂದು ಕಿಡಿಗಾರಿದ್ದಾರೆ.

'ಮತಗಳ್ಳತನ'ದ ಕುರಿತು ರಾಹುಲ್ ಗಾಂಧಿ ಆಘಾತಗೊಳಿಸುವ ಹಾಗೂ ಆಶ್ಚರ್ಯಕರ ಅಂಶವನ್ನು ಹೊರಗೆಡವಿದ್ದಾರೆ. ಕಾಂಗ್ರೆಸ್ ಪಕ್ಷವು ಮತಗಳ್ಳತನದ ವಿರುದ್ಧದ ಹೋರಾಟವನ್ನು ಸಂಸತ್ತಿನಿಂದ ಜನತಾ ನ್ಯಾಯಾಲಯದ ಬಳಿಗೆ ತೆಗೆದುಕೊಂಡು ಹೋಗುತ್ತಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಬಿಜೆಪಿ ತನ್ನ ಅಪಾಯಕಾರಿ ನಡೆಗಳಿಂದ ಕೇವಲ ಅಧಿಕಾರವನ್ನು ಮಾತ್ರ ಕಬಳಿಸುತ್ತಿಲ್ಲ. ಬದಲಾಗಿ ದೇಶದ ಒಂದೊಂದೆ ಸ್ವಾಯತ್ತ ಸಂಸ್ಥೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈಗ ಅಂತಿಮವಾಗಿ ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದು ಅವರು ದೂರಿದ್ದಾರೆ.

ಚುನಾವಣಾ ಆಯೋಗವನ್ನು ಬಿಜೆಪಿ ತನ್ನ ಹೊಸ ಅಸ್ತ್ರವಾಗಿ ಪರಿವರ್ತಿಸಿಕೊಂಡು ‘ಎಲೆಕ್ಷನ್’ ಕಮಿಷನ್ ಬದಲಾಗಿ ‘ಎರೇಸರ್’ ಕಮಿಷನ್ ಆಗಿ ಬಳಸಿಕೊಂಡು ಮತದಾರರನ್ನು ಅಳಿಸಲು, ಅವರ ಧ್ವನಿಗಳನ್ನು ನಿಗ್ರಹಿಸಲು ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಅಡಿಪಾಯವನ್ನು ನಾಶಮಾಡುವ ಆಯೋಗವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ನಡೆದಿರುವ ಅಕ್ರಮ ಕೇವಲ ಆರಂಭ ಮಾತ್ರ. ಇದು ಕೇವಲ ಕಣ್ತಪ್ಪಿನಿಂದಾದ ಪ್ರಮಾದವಲ್ಲ ಬದಲಾಗಿ ಪೂರ್ವಯೋಜಿತ ವಂಚನೆ. ಮಹಾರಾಷ್ಟ್ರ ಚುನಾವಣೆ ಸಮಯದಲ್ಲಿ ಕೇವಲ 1 ಗಂಟೆ ಅಂತರದಲ್ಲಿ 70 ಲಕ್ಷ ಮತಗಳು ಚಲಾವಣೆಯಾಗಿವೆ. ಇದು ಮತದಾನವಲ್ಲ ಬದಲಾಗಿ ಹ್ಯಾಕಿಂಗ್. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕೇವಲ 10 ನಿಮಿಷಗಳಲ್ಲಿ 65 ಸಾವಿರ ಮತಗಳು ಇದೇ ರೀತಿ ಚಲಾಯಿಸಲ್ಪಟ್ಟವು ಎಂದು ಸುರ್ಜೆವಾಲಾ ಹೇಳಿದ್ದಾರೆ.

ರಾಹುಲ್ ಗಾಂಧಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ 6ರ ದುರುಪಯೋಗದ ಮೂಲಕ ಅಮಾನ್ಯ ಫೋಟೋಗಳು/ ಮತಗಳೊಂದಿಗೆ 1,00,250 ಮತಗಳು ನಕಲಿ/ವಂಚನೆ/ಬಲ್ಕ್ ಮತಗಳಾಗಿವೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ನರೇಂದ್ರ ಮೋದಿ ವಿರುದ್ಧ 2019 ರಿಂದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷವು 27 ದೂರುಗಳನ್ನು ದಾಖಲಿಸಿದೆ. ಇದರಲ್ಲಿ ಒಂದಕ್ಕೂ ಕ್ರಮ ಕೈಗೊಳ್ಳಲಾಗಿಲ್ಲ. ಕರ್ನಾಟಕದ ನೆಲ ಬಿಜೆಪಿ ಹಾಗೂ ಚುನಾವಣಾ ಆಯೋಗದ ಎಲ್ಲ ಅಕ್ರಮಗಳಿಗೆ ಮುಖ್ಯ ಭೂಮಿಕೆಯಾಗಿದೆ. ಈ ವಂಚನೆಯನ್ನು ನಾವು ಬೀದಿ ಬೀದಿಗಳಲ್ಲಿ ಮತ್ತು ಬೂತ್‍ನಿಂದ ಬೂತ್‍ಗೆ ಬಹಿರಂಗಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ವಲಸೆ ಕಾರ್ಮಿಕರು ಮತದಾನದಿಂದ ವಂಚಿತರಾಗಿದ್ದಾರೆ. ದಲಿತರು ಮತ್ತು ಆದಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗುತ್ತಿದೆ. ಬಿಜೆಪಿ ಚುನಾವಣೆಗಳಲ್ಲಿ ಮಾತ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಒಂದೊಂದೇ ಹೆಸರುಗಳನ್ನು ಬಳಸಿಕೊಂಡು ಅಳಿಸಿ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಅಳಿಸಿ ಹಾಕುವ ಹೊಂಚು ಮಾಡುತ್ತಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.

ಚುನಾವಣಾ ಆಯೋಗವು ಭಾರತೀಯ ಪ್ರಜಾಪ್ರಭುತ್ವದ ಅಂತ್ಯಕ್ರಿಯೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷ ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನ್ಯಾಯಾಲಯಗಳಲ್ಲಿ, ಬೀದಿಗಳಲ್ಲಿ, ಸಂಸತ್ತಿನಲ್ಲಿ ಮತ್ತು ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣದಲ್ಲಿ ಈ ಅನ್ಯಾಯ, ಅಕ್ರಮ, ಮೋಸ, ವಂಚನೆಯ ವಿರುದ್ಧ ಹೋರಾಡುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ನಾವು ಜನರನ್ನು ಎಚ್ಚರಗೊಳಿಸಿ ಈ ವಂಚನೆಯನ್ನು ಬೆಳಕಿಗೆ ತರುತ್ತೇವೆ. ಮೌನದ ಸಮಯ ಮುಗಿದಿದೆ. ವಿರೋಧಿಸುವ ಸಮಯ ಬಂದಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News