ಶಿಕ್ಷಕರ ನೇಮಕಾತಿ ಅಧಿಸೂಚನೆಗಳ ಲೋಪ ಸರಿಪಡಿಸಲು SYM ಕರ್ನಾಟಕದಿಂದ ಸಚಿವ ರಿಝ್ವಾನ್ ಅರ್ಷದ್‌ಗೆ ಮನವಿ

Update: 2026-08-17 13:47 IST

ಬೆಂಗಳೂರು: ಕರ್ನಾಟಕದಲ್ಲಿ 2026–27ನೇ ಸಾಲಿನ PSTR, GPTR ಹಾಗೂ HSTR ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಗಳಲ್ಲಿರುವ ಲೋಪಗಳನ್ನು ಕೂಡಲೇ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ (SYM) ಕರ್ನಾಟಕ ಆಗ್ರಹಿಸಿದೆ.

ಈ ಕುರಿತು SYM ಕರ್ನಾಟಕದ ನಿಯೋಗವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ರಿಝ್ವಾನ್ ಅರ್ಷದ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

ನೇಮಕಾತಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಪರಿಷ್ಕೃತ ಅಥವಾ ಪೂರಕ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಬಾಕಿ ಇರುವ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಸಚಿವರಿಗೆ ಮನವಿ ಮಾಡಲಾಯಿತು.

ಮುಖ್ಯವಾಗಿ ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳ ಸೇರ್ಪಡೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಪ್ರಕಟಣೆ, ಪರೀಕ್ಷೆಯ ಭಾಷಾ ಆಯ್ಕೆಗೆ ಸೂಕ್ತ ಅವಕಾಶ ಹಾಗೂ ಐದು ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.

ರಾಜ್ಯದ ಸಾವಿರಾರು ಶಿಕ್ಷಕ ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು SYM ಕರ್ನಾಟಕ ಒತ್ತಾಯಿಸಿತು.

ಈ ಸಂದರ್ಭದಲ್ಲಿ SYM ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ.ನಸೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ತೀರ್ಥಹಳ್ಳಿ, ಸಂಘಟನಾ ಕಾರ್ಯದರ್ಶಿ ಅಸದುಲ್ಲಾ ಝಕಿ, ಕಾರ್ಯದರ್ಶಿಗಳಾದ ಮುಝಮ್ಮಿಲ್ ಹಕ್ಕಿ ಹಾಗೂ ಇರ್ಷಾದ್ ವೇಣೂರು, ಸುಹೇಲ್ ಮಸುಲ್ದಾರ್ ಉಪಸ್ಥಿತರಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News