Bengaluru | ಮಹಿಳಾ ಪಿಎಸ್‍ಐ ಮೇಲೆ ಹಲ್ಲೆ ಆರೋಪ; ಎಫ್‍ಐಆರ್ ದಾಖಲು
ಬೆಂಗಳೂರು : ಕರ್ತವ್ಯನಿರತರಾಗಿದ್ದ ಸಂಚಾರಿ ಮಹಿಳಾ ಪೊಲೀಸ್ ಸಬ್‍ಇನ್ಸ್ ಪೆಕ್ಟರ್(ಪಿಎಸ್‍ಐ) ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕೀಳುಮಟ್ಟದ ಪದಗಳಿಂದ ದೇಹದ ಆಕಾರವನ್ನು ನೋಡಿ ಗೇಲಿ(ಬಾಡಿ ಶೇಮಿಂಗ್) ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಂಚಾರಿ ಮಹಿಳಾ ಪಿಎಸ್‍ಐ ನಯಾನಾ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಹೇಮಂತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಹರ್ಷಿತ್ ರೆಡ್ಡಿ ಹಾಗೂ ರಾಹುಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಟರಹಳ್ಳಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೇದೆ ಮಂಜುನಾಥ್ ಎಂಬುವವರೊಂದಿಗೆ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುತ್ತಿದ್ದರು. ಇದನ್ನು ಗಮನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಲಾಟೆ ಬಿಡಿಸಲು ಸಂಚಾರಿ ಪೊಲೀಸ್ ಪಿಎಸ್‍ಐ ನಯನಾ ಸ್ಥಳಕ್ಕೆ ಬಂದಿದ್ದರು. ಆಗ ಆರೋಪಿಗಳು ನಯನಾ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಪೂರ್ಣ ಕೃತ್ಯವು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ನಾಲ್ವರು ಆರೋಪಿಗಳ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.