ಸರಕಾರಕ್ಕೆ ಕನಿಷ್ಠ ಆತ್ಮಸಾಕ್ಷಿ ಎನ್ನುವುದೇನೂ ಇಲ್ಲವೇ? : ಆರ್.ಅಶೋಕ್
ಬೆಂಗಳೂರು : ‘ಮಂಡ್ಯದ ರೈತರ ಹೊಲ-ಗದ್ದೆಗಳು ಒಣಗಿ ಕಂಗಾಲಾಗಿದ್ದರೂ, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ನಿಮ್ಮ ನಾಡದ್ರೋಹಿ ಕಾಂಗ್ರೆಸ್ ಸರಕಾರಕ್ಕೆ ಕನಿಷ್ಠ ಆತ್ಮಸಾಕ್ಷಿ ಅನ್ನೋದೇ ಇಲ್ಲವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ?’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಕೆಆರ್‍ಎಸ್‍ನ 10 ಗೇಟ್‍ಗಳನ್ನು ಮಧ್ಯರಾತ್ರಿ ತೆರೆದು ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯದ ರೈತರು ತಮ್ಮ ಬೆಳೆಗಳಿಗೆ ನೀರಿನ ಆತಂಕದಲ್ಲಿದ್ದರೆ, ಅಧಿಕಾರಿಗಳ ಹೇಳಿಕೆಯ ಹಿಂದೆ ಅಡಗಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದ್ದಾರೆ.
‘ಇಷ್ಟಕ್ಕೂ ಸತ್ಯ ಯಾವುದು, ಸಿಎಂ ಡಿಕೆಶಿ ಅವರೇ?. ಕೆಆರ್‍ಎಸ್‍ನಿಂದ ಎಷ್ಟು ನೀರು ಹರಿಯಿತು, ಯಾವ ಸಮಯದಲ್ಲಿ ಹರಿಯಿತು, ಯಾರ ಆದೇಶದ ಮೇರೆಗೆ ಹರಿಯಿತು ಎಂಬ ಸತ್ಯವನ್ನು ಬಹಿರಂಗಪಡಿಸಲು ನಿಮಗೇಕೆ ಭಯ?. ಮೈತ್ರಿ ರಕ್ಷಣೆಗಾಗಿ ಮತ್ತು ಸ್ವಾರ್ಥ ರಾಜಕಾರಣಕ್ಕಾಗಿ ಕರ್ನಾಟಕದ ನೀರು ಹಾಗೂ ರೈತರ ಬದುಕನ್ನು ತಮಿಳುನಾಡಿಗೆ ಅಡವಿಟ್ಟಿರುವ ನಿಮ್ಮ ಈ ದ್ರೋಹದ ಆಡಳಿತಕ್ಕೆ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ.
‘ಕರ್ನಾಟಕದ ನೀರು, ರೈತರ ಬದುಕು, ಇದನ್ನು ರಾಜಕೀಯ ರಾಜಿ-ಸಂಧಾನಕ್ಕೆ ಬಲಿಕೊಡಲು ಬಿಡುವುದಿಲ್ಲ. ತಕ್ಷಣವೇ ಕದ್ದುಮುಚ್ಚಿ ನೀರು ಹರಿಸುವುದನ್ನು ನಿಲ್ಲಿಸಿ, ಮಂಡ್ಯದ ರೈತರ ಹಿತ ಕಾಯದಿದ್ದರೆ ನಿಮ್ಮ ಈ ನಾಡದ್ರೋಹಿ ಕಾಂಗ್ರೆಸ್ ಸರಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
— R. Ashoka (@RAshokaBJP) August 16, 2026
ಮಂಡ್ಯದ ರೈತರ ಹೊಲ-ಗದ್ದೆಗಳು ಒಣಗಿ ಕಂಗಾಲಾಗಿದ್ದರೂ, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ನಿಮ್ಮ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನಿಷ್ಠ ಆತ್ಮಸಾಕ್ಷಿ ಅನ್ನೋದೇ ಇಲ್ಲವೇ ಸಿಎಂ @DKShivakumar ಅವರೇ?
ಕೆಆರ್ಎಸ್ (KRS) ಜಲಾಶಯದ 10 ಗೇಟ್‍ಗಳನ್ನು ಮಧ್ಯರಾತ್ರಿ… pic.twitter.com/7KzxbXKNeD
‘ಉದ್ಯೋಗ ಕೊಡುವುದು ದೂರದ ಮಾತು, ಕನಿಷ್ಠ ಪಕ್ಷ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಲೂ ಯೋಗ್ಯತೆ ಇಲ್ಲ ಈ ನಾಲಾಯಕ್ ಕಾಂಗ್ರೆಸ್ ಸರಕಾರಕ್ಕೆ. ಮುಖ್ಯಮಂತ್ರಿಗಳೇ, ಬಣ್ಣ ಬಣ್ಣದ ಮಾತು, ಶೋಕಿ ರಾಜಕಾರಣ ಮಾಡುವುದನ್ನು ಬಿಟ್ಟು, ತಕ್ಷಣವೇ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ, ಪ್ರಮಾಣ ಪತ್ರ ವಿತರಣೆಯನ್ನು ಸುಗಮಗೊಳಿಸಿ, ಉದ್ಯೋಗಾಕಾಂಕ್ಷಿಗಳ ಅರ್ಜಿ ಸಲ್ಲಿಕೆ ಕಾಲಾವಕಾಶವನ್ನು ವಿಸ್ತರಿಸಿ, ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’
-ಆರ್.ಅಶೋಕ್, ಪ್ರತಿಪಕ್ಷ ನಾಯಕ