×
Ad

ಪ್ರೋತ್ಸಾಹಧನಕ್ಕೆ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ : ಎನ್.ಎಸ್.ಭೋಸರಾಜು

Update: 2025-03-20 23:33 IST

ಎನ್.ಎಸ್.ಭೋಸರಾಜು

ಬೆಂಗಳೂರು : ಪ್ರಾದೇಶಿಕ ಹಾಗೂ ಕನ್ನಡದ ಗುಣಮಟ್ಟದ ಚಲನಚಿತ್ರಗಳಿಗೆ ನೀಡಲಾಗುವ ಪ್ರೋತ್ಸಾಹಧನ ನೀಡುವ ಸಂಬಂಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದು, ಈಗಾಗಲೇ ಸಮಿತಿಗಳನ್ನು ರಚಿಸಲಾಗಿದ್ದು, ಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವಿಧಾನಪರಿಷತ್ತಿನ ಸಭಾ ನಾಯಕ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಗುರುವಾರ ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ಡಾ.ಉಮಾಶ್ರೀ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಉತ್ತರಿಸಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಆಯಾ ವರ್ಷದ ಆಯ್ಕೆ ಸಮಿತಿಗಳನ್ನು ರಚಿಸದ ಕಾರಣದಿಂದಾಗಿ 2019ರಿಂದ ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡಲು ಸಾಧ್ಯವಾಗಿರಲಿಲ್ಲ. ಇದನ್ನು ಅರಿತು 2019ರಿಂದ 22ರವರೆಗೆ ಪ್ರತ್ಯೇಕ ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಈಗಾಗಲೇ 2019 ವರ್ಷದಲ್ಲಿ ತೆರೆಕಂಡಿರುವ ಚಿತ್ರಗಳಿಗೆ ಸಬ್ಸಿಡಿ ಘೋಷಿಸಲಾಗಿದೆ. ಇನ್ನುಳಿದ ಮೂರು ವರ್ಷಗಳಲ್ಲಿ ತೆರೆಕಂಡ ಚಿತ್ರಗಳನ್ನು ನೋಡಿ ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. 2023 ಹಾಗೂ 2024ನೇ ಸಾಲಿನ ಆಯ್ಕೆ ಸಲಹಾ ಸಮಿತಿ ರಚಿಸಿ ಸಹಾಯಧನಕ್ಕೆ ಅರ್ಜಿ ಆಹ್ವಾನ ಬಾಕಿಯಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎನ್.ಎಸ್.ಬೋಸರಾಜು ಹೇಳಿದರು.

ಚಾರಿತ್ರಿಕ ಹಾಗೂ ರಾಜ್ಯದ ಪ್ರವಾಸಿ ತಾಣಗಳನ್ನು ಕೇಂದ್ರೀಕರಿಸಿ ನಿರ್ಮಿಸುವ ಗರಿಷ್ಠ 4 ಚಿತ್ರಗಳಿಗೆ ತಲಾ 25 ಲಕ್ಷ ರೂ., ಅತ್ಯುತ್ತಮ ರಾಜ್ಯ ಪ್ರಶಸ್ತಿ ಪಡೆದ ಮಕ್ಕಳ ಚಲನಚಿತ್ರ ಒಳಗೊಂಡಂತೆ 4 ಚಿತ್ರಗಳಿಗೆ ತಲಾ 25 ಲಕ್ಷ ರೂ., ಸಾಮಾನ್ಯ ವಿಭಾಗದಲ್ಲಿ ಆಯ್ಕೆಗೊಂಡ ಚಿತ್ರಗಳಿಗೆ ತಲಾ 10 ಲಕ್ಷ ರೂ. ನೀಡಲಾಗುತ್ತಿದೆ ಎಂದು ಎನ್.ಎಸ್.ಬೋಸರಾಜು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News