ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ʼಶೇ.50ರಷ್ಟು ರಿಯಾಯಿತಿʼ : ಬೆಂಗಳೂರಿನಲ್ಲಿ 7.19 ಕೋಟಿ ರೂ.ದಂಡ ಸಂಗ್ರಹ
ಬೆಂಗಳೂರು, ಆ.25: ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಸರಕಾರ, ಶೇ.50ರಷ್ಟು ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ಮೊದಲ ಎರಡು ದಿನ 7.19 ಕೋಟಿ ರೂ. ದಂಡ ಪಾವತಿಯಾಗಿದೆ.
ರಾಜಧಾನಿಯಲ್ಲಿ ಒಟ್ಟು 2,56,102 ಪ್ರಕರಣಗಳು ಇತ್ಯರ್ಥವಾಗಿದ್ದು 7,19,51,500 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.
ಸದ್ಯ ದಂಡ ಪಾವತಿಗೆ ಒಂದು ಬಾರಿಯ ರಿಯಾಯಿತಿ ನೀಡಲಾಗಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ರಿಯಾಯಿತಿ ಇರಲಿದೆ. ಆದರೆ ಈ ರಿಯಾಯತಿ 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರವೇ ಅನ್ವಯವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್(ಕೆಎಸ್‍ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‍ಸೈಟ್‍ನಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತಿಳಿದುಕೊಳ್ಳಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಳಿಕ ಪಾವತಿಸಲು ಇಚ್ಚಿಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿದರೆ, ರಿಯಾಯಿತಿ ಮೊತ್ತದ ಪಾವತಿಯ ಆಯ್ಕೆ ಲಭ್ಯವಾಗುತ್ತದೆ. ನಂತರ ದಂಡದ ಮೊತ್ತ ಪಾವತಿಸಬಹುದು. ಇದಲ್ಲದೆ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ತೆರಳಿ ವಾಹನದ ನೋಂದಣಿ ಸಂಖ್ಯೆಯ ವಿವರ ನೀಡುವ ಮೂಲಕವೂ ಸಹ ದಂಡ ಪಾವತಿಸಬಹುದು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ತಪ್ಪಾಗಿ ದಂಡ ವಿಧಿಸಲಾಗಿದ್ದರೆ, ಮರುಪರಿಶೀಲನೆಯ ದೂರನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ದೂರು ಸಲ್ಲಿಸುವ ಮೂಲಕವೂ ಸರಿಪಡಿಸಿಕೊಳ್ಳಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.