ನಾಳೆಯಿಂದ ʼಹಳದಿ ಮಾರ್ಗʼದಲ್ಲಿ ರೈಲು ಸಂಚಾರ : ವೇಳಾಪಟ್ಟಿ ಇಲ್ಲಿದೆ..
ಬೆಂಗಳೂರು : ನಗರದ ಆರ್‌ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯು ನಾಳೆಯಿಂದ(ಆ.11) ಪ್ರಾರಂಭವಾಗಲಿದ್ದು, ಈ ಮಾರ್ಗದ ರೈಲು ಸಂಚಾರದ ವೇಳಾಪಟ್ಟಿಯನ್ನು ನಮ್ಮ ಮೆಟ್ರೋ ನಿಗದಿಪಡಿಸಿದೆ.
ಸೋಮವಾರದಿಂದ ಶನಿವಾರದ ವರೆಗೆ ಆರ್.ವಿ.ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 6.30ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣ ಸಮಯವು ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರುತ್ತದೆ. ಒಟ್ಟು 16 ನಿಲ್ದಾಣಗಳಿವೆ. ಇದರಲ್ಲಿ ಎರಡು ಟರ್ಮಿನಲ್‍ಗಳು ಸೇರಿವೆ.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42ಕ್ಕೆ ಮತ್ತು ಆರ್.ವಿ.ರೋಡ್ ಇಂಟರ್ ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55ಕ್ಕೆ ಹೊರಡುತ್ತದೆ. ಬೆಳಗ್ಗೆ 6.30ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ ಎಂದು ತಿಳಿಸಿದೆ.
ರವಿವಾರದಲ್ಲಿ ರೈಲು ಸೇವೆಗಳು ಬೆಳಿಗ್ಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗುತ್ತವೆ. ಪ್ರಯಾಣದ ದರ 60 ರೂ.ಗಳಾಗಿದ್ದು, ಟೋಕನ್‍ಗಳು, ಬಿಎಂಆರ್‍ಸಿಎಲ್ ಸ್ಮಾರ್ಟ್ ಕಾರ್ಡ್‍ಗಳು, ಕ್ಯೂಆರ್ ಟಿಕೆಟ್‍ಗಳು ಎಂದಿನಂತೆಯೇ ಲಭ್ಯವಿರುತ್ತವೆ.
ಐಫೋನ್ ಬಳಸುವ ಬಿಎಂಆರ್‍ಸಿಎಲ್ ಪ್ರಯಾಣಿಕರು ಆ.11ರಿಂದ ಆಪಲ್ ಸ್ಟೋರ್‍ನಿಂದ ನಮ್ಮ ಮೆಟ್ರೋ ಅಧಿಕೃತ ಆಪ್‍ನ್ನು ಡೌನ್‍ಲೋಡ್ ಮಾಡಿಕೊಂಡು, ಕ್ಯೂಆರ್ ಟಿಕೆಟ್‍ಗಳನ್ನು ಖರೀದಿಸಲು ಹಾಗೂ ಬಿಎಂಆರ್‍ಸಿಎಲ್ ಸ್ಮಾರ್ಟ್ ಕಾರ್ಡ್‍ಗಳನ್ನು ರೀಚಾರ್ಜ್ ಮಾಡಲು ಬಳಸಿಕೊಳ್ಳಬಹುದು. ಹೆಚ್ಚು ರೈಲು ಸೆಟ್‍ಗಳನ್ನು ಸೇವೆಗೆ ಸೇರಿಸುತ್ತಿದ್ದಂತೆ ಈ ಮಾರ್ಗದಲ್ಲಿ ರೈಲು ಸಂಚಾರದ ಅವಧಿಯನ್ನು ಹೆಚ್ಚಿಸಲಾಗುವುದು ಎಂದು ನಮ್ಮ ಮೆಟ್ರೋ ಪ್ರಕಟನೆಯಲ್ಲಿ ತಿಳಿಸಿದೆ.