ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಮಂಗಳಮುಖಿ ನಾಯಕಿಯ ಹತ್ಯೆ
ತನುಶ್ರೀ
ಬೆಂಗಳೂರು: ಮಂಗಳಮುಖಿ ಸಮುದಾಯದ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿದ್ದ ತನುಶ್ರೀ ಅನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಈಕೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್‍ನಲ್ಲಿ ವಾಸವಾಗಿದ್ದ ಮಂಗಳಮುಖಿ ತನುಶ್ರೀ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಹಾಗೇ ಸಂಗಮ ಎನ್‍ಜಿಒ ನಡೆಸುತ್ತಿದ್ದ ಇವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೂರು ತಿಂಗಳ ಹಿಂದೆ ಜಗನ್ನಾಥ್ ಎಂಬುವರ ಜೊತೆ ತನುಶ್ರೀ ವಿವಾಹವಾಗಿದ್ದು, ಹಣ ಮತ್ತು ಚಿನ್ನಾಭರಣಕ್ಕಾಗಿ ತನುಶ್ರೀ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಕೃತ್ಯದ ಬಳಿಕ ಪತಿ ಜಗನ್ನಾಥ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿ ಆಗಿದ್ದಾರೆ. ಈ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪುರಂ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಇನ್ನೊಂದೆಡೆ, ನೂರಾರು ಮಂಗಳಮುಖಿಯರು ಜಮಾವಣೆಗೊಂಡಿದ್ದು, ಆಕ್ರೋಶ ಹೊರಹಾಕಿದ್ದಾರೆ.