ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಹತ್ಯೆ
ಕೆ.ವಿ. ಪ್ರಶಾಂತ್ ರೆಡ್ಡಿ/ವೀರಸ್ವಾಮಿರೆಡ್ಡಿ
ಬೆಂಗಳೂರು : ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಇಂದು(ಬುಧವಾರ) ನಡೆದಿರುವುದಾಗಿ ವರದಿಯಾಗಿದೆ.
ಕೊಲೆಯಾದವರನ್ನು ಮಹದೇವಪುರ ಬಿಜೆಪಿ ಯುವ ಮುಖಂಡ ಮತ್ತು ಉದ್ಯಮಿ ಪ್ರಶಾಂತರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಎಂದು ಗುರುತಿಸಲಾಗಿದೆ.
ಉದ್ಯಮಿಗಳಾಗಿವೂ ಗುರುತಿಸಿಕೊಂಡಿದ್ದ ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸ್ ವಿಚಾರಣೆಗೆ ಆಂಧ್ರ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಪ್ರಶಾಂತ್ ಮತ್ತು ವೀರಸ್ವಾಮಿರೆಡ್ಡಿ ಇಬ್ಬರೂ ಬಿಲ್ಡರ್ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆಂಧ್ರ ಮೂಲದ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ತಂದೆ- ಮಗನ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಇಂದು ಬೆಳ್ಳಗ್ಗೆಯಿಂದ ಮದ್ಯಾಹ್ನ 12 ಗಂಟೆವರೆಗೂ ಅಪ್ಪ-ಮಗ ಇಬ್ಬರೂ ಕೋರ್ಟ್ ಬಳಿಯೇ ಇದ್ದರು. ಆದರೆ, 12 ಗಂಟೆ ಸುಮಾರಿಗೆ ಕೋರ್ಟ್ ಬಳಿಯೇ ತಂದೆ-ಮಗ ಇಬ್ಬರನ್ನೂ ಮಾತುಕತೆಗೆ ಕರೆದ ಮಾಧವರೆಡ್ಡಿ ಮತ್ತು ಅನಿಲ್ ರೆಡ್ಡಿ ರಾಜಿಯಾಗೋಣವೆಂದು ಮಾತನಾಡುತ್ತಲೇ, ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ತಂದೆ-ಮಗನ ಮೃತದೇಹ ಹೆದ್ದಾರಿ ಬಳಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.