×
Ad

‘ಧರ್ಮಸ್ಥಳ ಪ್ರಕರಣ’ ಬಿಜೆಪಿಯವರದ್ದೇ ಷಡ್ಯಂತ್ರ : ವೀರಪ್ಪ ಮೊಯ್ಲಿ

"ಬಿಜೆಪಿಯವರಿಗೆ ಧರ್ಮಸ್ಥಳದ ವಿವಾದ ಕೊನೆಗೊಳ್ಳುವುದು ಬೇಕಿಲ್ಲ"

Update: 2025-09-02 19:41 IST

ಬೆಂಗಳೂರು, ಸೆ. 2: ‘ಧರ್ಮಸ್ಥಳ ಪ್ರಕರಣ’ ಸಂಬಂಧದ ಎಸ್‍ಐಟಿ ತನಿಖೆಯನ್ನು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಹೀಗಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಪ್ರತಿಪಕ್ಷ ಮುಖಂಡರು ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಇಂದಿಲ್ಲಿ ದೂರಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವೀರಪ್ಪ ಮೊಯ್ಲಿ, ‘ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ, ಸೌಜನ್ಯ ಅವರ ಮನೆಗೆ ಭೇಟಿ ನೀಡುವ ಮೂಲಕ ವಿವಾದವನ್ನು ಅನಗತ್ಯವಾಗಿ ಕೆಣಕುತ್ತಿದ್ದಾರೆ ಆಕ್ಷೇಪಿಸಿದರು.

ಬಿಜೆಪಿಯವರಿಗೆ ಧರ್ಮಸ್ಥಳದ ವಿವಾದ ಕೊನೆಗೊಳ್ಳುವುದು ಬೇಕಿಲ್ಲ. ನೀರಿನಲ್ಲಿ ಮುಳುಗುವ ಮನುಷ್ಯನಿಗೆ ಒಂದು ಹುಲ್ಲು ಕಡ್ಡಿಯೂ ಆಶ್ರಯವಾಗುತ್ತದೆ ಎಂಬಂತೆ ಬಿಜೆಪಿಯವರಿಗೆ ಇದೀಗ ಧರ್ಮಸ್ಥಳದ ವಿವಾದ ಬೇಕಿದೆ. ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಿ ದೋಷಾರೋಪಣಾ ವರದಿ ಸಲ್ಲಿಕೆಯಾಗಿ, ಕೋರ್ಟ್ ತೀರ್ಪು ನೀಡಿದೆ. ಆದರೂ ಬಿಜೆಪಿಯವರು ಸೌಜನ್ಯ ಮನೆಗೆ ಭೇಟಿ ನೀಡಿ ಅನುಕಂಪ ವ್ಯಕ್ತಪಡಿಸುವ ಮೂಲಕ ವಿವಾದವನ್ನು ಕೆಣಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಎಸ್‍ಐಟಿ ತನಿಖೆ ಮುಕ್ತಾಯದ ಹಂತದಲ್ಲಿದೆ. ಇದೀಗ ಬಿಜೆಪಿ, ಎನ್‍ಐಎ, ಸಿಬಿಐ ತನಿಖೆ ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲ ಮೂಡಿಸುತ್ತದೆ. ವೀರೇಂದ್ರ ಹೆಗ್ಗಡೆ ಅವರು ತುಂಬಾ ಒಳ್ಳೆಯವರು, ತಿಳುವಳಿಕೆ ಹೊಂದಿರುವವರು. ಬಿಜೆಪಿಯವರಿಗೆ ತಿಳುವಳಿಕೆ ಇಲ್ಲ ಎಂದು ವೀರಪ್ಪ ಮೊಯ್ಲಿ ಕಿಡಿಕಾರಿದರು.

ದಕ್ಷಿಣ ಕನ್ನಡ ಜಿಲ್ಲೆಯವರಾದ ನಾವು, ಎಸ್‍ಐಟಿ ತನಿಖಾ ವರದಿ ಬರುವವರೆಗೂ ಮಾತನಾಡುವುದಿಲ್ಲ. ಕೊನೆಗೆ ಸತ್ಯಕ್ಕೆ ಜಯ ಸಿಗಲೇಬೇಕು. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರವಾಗಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನಿಜ. ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸತ್ಯ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಅವರು ದೊಡ್ಡ ಸಾಹಿತಿ. ಹೀಗಾಗಿಯೇ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಅವರು ಮುಸ್ಲಿಮ್ ಸಮುದಾಯದಲ್ಲಿ ಹುಟ್ಟಿದ್ದಾರೆಂಬ ಕಾರಣಕ್ಕಾಗಿ ವಿರೋಧ ಮಾಡಿ, ಸಾಹಿತ್ಯ ವಲಯಕ್ಕೆ ಬಿಜೆಪಿ, ಅಪಮಾನ ಮಾಡುತ್ತಿದೆ ಎಂದು ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News