ಮೆಮೋ ರೈಲಿನಲ್ಲಿ ಬೆಂಗಳೂರು–ತುಮಕೂರು ನಡುವೆ 20 ರೂ.ಟಿಕೆಟ್ ದರ ನಿಗದಿ : ಕೇಂದ್ರ ಸಚಿವ ವಿ.ಸೋಮಣ್ಣ
ವಿ.ಸೋಮಣ್ಣ
ಬೆಂಗಳೂರು : ಬೆಂಗಳೂರು ಮತ್ತು ಮೈಸೂರು ನಡುವೆ ನಾಲ್ಕು ಮೆಮೋ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಕೇವಲ 35 ರೂ.ಗಳಲ್ಲಿ ಪ್ರಯಾಣಿಸಬಹುದು. ಅದೇ ರೀತಿ, ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ಮೆಮೋ ರೈಲಿನಲ್ಲಿ 20 ರೂ.ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರವಿವಾರ ನಗರದಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ, ಸಾಧು ಸಂಗಮ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕರ್ಪಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿರುವುದರಿಂದ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗ ಸಿಗುತ್ತದೆ. ಚುನಾವಣೆಗಳು ಐದು ವರ್ಷಕ್ಕೆ ಒಮ್ಮೆ ಬರುತ್ತವೆ. ಆದರೆ, ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ಅನುಕೂಲ ಮಾಡಿಕೊಟ್ಟರೆ ಮಾತ್ರ ನಾವು ಜನಪ್ರತಿನಿಧಿ ಎಂದು ಕರೆಸಿಕೊಳ್ಳಲು ಅರ್ಹರಾಗುತ್ತೇವೆ ಎಂದು ಅವರು ತಿಳಿಸಿದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಹಕಾರ ತತ್ವದ ಮೂಲಕ ಸಮುದಾಯ ಅಭಿವೃದ್ದಿ ಸಾಧಿಸಬೇಕು. ಸಾದರ ಹಿಂದೂ ಸಮಾಜ ಅತಿ ಚಿಕ್ಕ ಸಮುದಾಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ. ದೊಡ್ಡ ದೊಡ್ಡ ಸಮುದಾಯಗಳು ರಾಜಕೀಯವಾಗಿ ಪ್ರಬಲವಾಗಿರುತ್ತವೆ. ಅದೇ ರೀತಿ ಸಣ್ಣ ಸಮುದಾಯಗಳು ತಮ್ಮ ಧ್ವನಿಯನ್ನು ಒಟ್ಟು ಮಾಡಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಹಕಾರಿ ಕ್ಷೇತ್ರ ಜನರ ಅಂದೋಲನವಾಗಬೇಕು. ನಿಮ್ಮ ಹಣ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ಸಹಕಾರ ಬ್ಯಾಂಕ್ ಗಳು ನಡೆಯುವಂತಾಗಬೇಕು. ಸಾದರ ಹಿಂದೂ ಸಮಾಜ ಚಿಕ್ಕ ಸಮಾಜವಿರಬಹುದು. ಆದರೆ, ಸಾಧನೆಯಲ್ಲಿ ಸಾದರ ಹಿಂದೂ ಸಮಾಜ ಹಿಂದೆ ಬಿದ್ದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಾದರ ಹಿಂದೂ ಸಮಾಜ ಕೊಡುಗೆ ನೀಡುತ್ತಿದೆ. ಜನರ ಹಿತ ದೃಷ್ಟಿಯಿಂದ ಸಹಕಾರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಹಕಾರ ಸಂಸ್ಥೆ ಸಿಲುಕದಂತೆ ನೋಡಿಕೊಳ್ಳಬೇಕು ಎಂದು ರಾಜಣ್ಣ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬ್ಯಾಂಕ್ ಅಧ್ಯಕ್ಷ ಬಿ.ಎನ್.ಲಕ್ಷ್ಮಿಪತಿ, ನಿರ್ದೇಶಕ ಮಂಡಳಿಯ ಪದಾಧಿಕಾರಿಗಳಾದ ಕೆ.ಜಿ.ದೇವರಾಜು, ಕೆ.ಜಯಣ್ಣ, ಟಿ.ಆರ್.ಚನ್ನಕೇಶವ, ಸುಕನ್ಯಾ ಅಮರನಾಥ್, ಟಿ.ಆರ್.ಗೋವಿಂದಯ್ಯ, ಟಿ.ಗೋವಿಂದರಾಜು, ಬಿ.ಎನ್.ಶ್ರೀನಿವಾಸ್, ಪಿ.ಕುಮಾರ್, ಪದ್ಮಾ, ಮುಖ್ಯಮಂತ್ರಿ ಚಂದ್ರು, ಪೂರ್ಣಸಾಗರ್, ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.