ದಾಖಲೆಗಳನ್ನು ಅಪ್ ಲೋಡ್ ಮಾಡಲು ಮಸೀದಿಗಳಿಗೆ ವಕ್ಫ್ ಮಂಡಳಿ ಸೂಚನೆ
ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೆ.19ರಂದು ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ರಾಜ್ಯದಲ್ಲಿ ನೋಂದಾಯಿತ ಎಲ್ಲಾ ಮಸೀದಿ, ದರ್ಗಾ ಹಾಗೂ ಇತರ ವಕ್ಫ್ ಸಂಸ್ಥೆಗಳ ಮುತ್ತವಲ್ಲಿಗಳು, ನಿರ್ವಹಣಾ ಸಮಿತಿಗಳು ಮತ್ತು ಆಡಳಿತಾಧಿಕಾರಿಗಳು ತಮ್ಮ ಸಂಸ್ಥೆಯ ದಾಖಲೆಗಳನ್ನು ಕಡ್ಡಾಯವಾಗಿ UWMEED ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಸೂಚಿಸಿದೆ.
ತಕ್ಷಣವೇ UWMEED Portal ನಲ್ಲಿ Maker ಆಗಿ ಕಡ್ಡಾಯವಾಗಿ ನೊಂದಾಯಿಸಿಕೊಂಡು, UWMEED ಕಾಯಿದೆ 2025 ಮತ್ತು ಅದರ ನಿಯಮಗಳ ಪ್ರಕಾರ ನಿಗದಿಪಡಿಸಿದ ದಾಖಲೆಗಳನ್ನುಮೂವತ್ತು ದಿನಗಳೊಳಗೆ ಅಪ್‌ಲೋಡ್ ಮಾಡಬೇಕು. ಅಪ್‌ಲೋಡ್ ಗಳು ಪೋರ್ಟಲ್‌ನಲ್ಲಿ ನೀಡಿರುವ ಸ್ವರೂಪ ಮತ್ತು ಫೈಲ್ ಗಾತ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು. ಇದರ ಪರಿಶೀಲನೆ ಮತ್ತು ಅನುಮೋದನೆಗಾಗಿ ವಿವಿಧ ಹಂತದ ವಕ್ಫ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಜಿಲ್ಲಾ ವಕ್ಫ್ ಅಧಿಕಾರಿಗಳು ಏಳು ದಿನಗಳಲ್ಲಿ ಪರಿಶೀಲನೆ ನಡೆಸಿ, ಅಧಿಕೃತ ಅನುಮೋದನಾಧಿಕಾರಿಗಳು ಇನ್ನೂ ಏಳು ದಿನಗಳಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. 2025ರ ಡಿ.5ರೊಳಗೆ ಸಂಪೂರ್ಣ ಅಪ್‌ಲೋಡ್ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು ಎಂದು ಆದೇಶಿಸಲಾಗಿದೆ.
ಅನುಸರಿಸದಿದ್ದಲ್ಲಿ ವಕ್ಫ್ ಕಾಯ್ದೆ ಮತ್ತು ಸಂಬಂಧಿತ ನಿಯಮಗಳಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.