×
Ad

ಅನಿಲ್ ಕುಂಬ್ಳೆಯಿಂದ ವನ್ಯಜೀವಿ, ಅರಣ್ಯ ಸಂರಕ್ಷಣೆಗೆ ಬಲ ದೊರೆತಿದೆ : ಈಶ್ವರ್‌ ಖಂಡ್ರೆ

Update: 2025-06-03 23:11 IST

ಈಶ್ವರ್‌ ಖಂಡ್ರೆ, ಅನಿಲ್ ಕುಂಬ್ಳೆ

ಬೆಂಗಳೂರು : ನಾಡಿನ ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗೆ ಈಗ ಅನಿಲ್ ಕುಂಬ್ಳೆ ಅವರ ಬಲ ದೊರೆತಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಪರಿಸರ ಪ್ರೇಮಿ ಅನಿಲ್ ಕುಂಬ್ಳೆ ಅವರೊಂದಿಗೆ ಸಮಾಲೋಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ, ಅರಣ್ಯ, ಪರಿಸರದ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿರುವ ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಇಲ್ಲದೆ ಅರಣ್ಯ, ವನ್ಯಜೀವಿ ರಾಯಭಾರಿ ಆಗಲು ಸಮ್ಮತಿಸಿದ್ದಾರೆ. ಇದು ಅವರ ಪರಿಸರ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದು ನುಡಿದರು.

ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಭಾರತ ತಂಡದ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕುಂಬ್ಳೆ ಅವರು ಕರ್ನಾಟಕದ ಅಷ್ಟೇ ಅಲ್ಲ ಭಾರತದ ಹೆಮ್ಮೆಯ ಪುತ್ರರಾಗಿದ್ದಾರೆ. ಜಿಮ್ ಲೇಕರ್ ಬಳಿಕ ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್‌ ನಲ್ಲಿ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡಿದ ಮಾಂತ್ರಿಕ ಬೌಲರ್ ಎಂದು ಬಣ್ಣಿಸಿದರು.

110 ಟೆಸ್ಟ್ ಪಂದ್ಯಗಳನ್ನು ಆಡಿ 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅವರು ಜಂಬೂ ಎಂದೂ ಖ್ಯಾತರಾಗಿದ್ದಾರೆ. ಅದೇ ರೀತಿ 264ಕ್ಕೂ ಅಧಿಕ ಏಕದಿನ ಪಂದ್ಯ ಆಡಿರುವ ಅವರು 337 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ಪ್ರಿಯರ ಹೃದಯದಲ್ಲಿ ನೆಲೆಸಿದ್ದಾರೆ. ಇವರು ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪ್ರಚಾರ, ಪ್ರಸಾರ ಮಾಡಲಿದ್ದು, ಜನರಲ್ಲಿ ಜಾಗೃತಿ ಮೂಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವೂ ಕುಂಬ್ಳೆ ಅವರಿಗಿದೆ. ಅನಿಲ್ ಕುಂಭ್ಳೆ ಅವರು ರಾಯಭಾರಿ ಆಗುತ್ತಿರುವುದು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂವರ್ಧನೆಗೆ ಬಲ ನೀಡಲಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ವನ್ಯಜೀವಿಗಳ ಉಳಿಸಿ ಬೆಳೆಸಲು ಸಹಕಾರ ಅಗತ್ಯ : ಅನಿಲ್ ಕುಂಬ್ಳೆ

ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಲು ಮತ್ತು ಉಳಿಸಿ ಬೆಳೆಸಲು ಎಲ್ಲ ಸಹಕಾರ ಅಗತ್ಯ ಎಂದು ಮಾಜಿ ಕ್ರಿಕೆಟಿಗ, ಕರ್ನಾಟಕ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ರಾಯಭಾರಿ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಲು ಪ್ರತಿಯೊಬ್ಬರ ಸಹಕಾರ ಕೂಡಾ ಮುಖ್ಯ. ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನನಗೆ ಜವಾಬ್ದಾರಿ ನೀಡಿ ರಾಜ್ಯ ಕಾಂಗ್ರೆಸ್ ಸರಕಾರ ಒಂದು ಅವಕಾಶ ಕೊಟ್ಟಿದೆ. ಮುಂಚೆಯೂ ನಾನು ವನ್ಯಜೀವಿ ಮಂಡಳಿ ಉಪಾಧ್ಯಕ್ಷನಾಗಿದ್ದೆ. ವನ್ಯಜೀವಿಗಳ ಮೇಲೆ ನನಗೆ ಕಾಳಜಿಯಿದೆ. ನನ್ನ ಕೈಯಲ್ಲಾಗುವ ಸೇವೆಯನ್ನು ನಾನು ಸಲ್ಲಿಸುತ್ತೇನೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News