ಎನ್ ಆರ್ ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ 'ಗ್ಯಾರಂಟಿ' ಈಡೇರಿಸಿ : ರಾಜ್ಯ ಸರಕಾರಕ್ಕೆ ಝಕರಿಯಾ ಜೋಕಟ್ಟೆ ಆಗ್ರಹ
ಝಕರಿಯಾ ಜೋಕಟ್ಟೆ
ಬೆಂಗಳೂರು, ಜೂ.8: ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವ ಘೋಷಣೆ ಮಾಡಿರುವ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಅನಿವಾಸಿಗಳ ಪರವಾಗಿ ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಅನಿವಾಸಿಗಳು ಸರಕಾರವನ್ನು ಹಲವು ವರ್ಷಗಳಿಂದ ಆಗ್ರಹಿಸುತ್ತಿರುವುದು ಅವರಿಗಾಗಿ ಪ್ರತ್ಯೇಕ ಖಾತೆ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿಯ ಆವರ್ತನ ನಿಧಿಗಳಿಗಾಗಿ. ಸ್ವತಃ ಕಾಂಗ್ರೆಸ್ ಕೂಡ 2023ರ ಚುನಾವಣಾ ಪ್ರಣಾಳಿಕೆಯಲ್ಲೇ ಅನಿವಾಸಿಗಳಿಗೆ ನೀಡಿರುವ ಚುನಾವಣಾ ಭರವಸೆ ಇದು. ಹಾಗಾಗಿ ಇನ್ನು ತಡ ಮಾಡದೇ ಆ ಎರಡೂ ಭರವಸೆಗಳನ್ನು ನೂತನ ಮುಖ್ಯಮಂತ್ರಿ ಈಡೇರಿಸಬೇಕು ಎಂದು ರಾಜ್ಯೋತ್ಸವ ಪುರಸ್ಕೃತ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ–ಸೌದಿ ಅರೇಬಿಯಾ ಇದರ ಅಧ್ಯಕ್ಷ ಝಕರಿಯಾ ಜೋಕಟ್ಟೆ ಆಗ್ರಹಿಸಿದ್ದಾರೆ.
ನೂತನ ಅನಿವಾಸಿ ಸೆಕ್ರೆಟರಿಯೇಟ್ ಸ್ಥಾಪನೆ ಘೋಷಣೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾವು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಅದರ ಜೊತೆಗೇ ಪ್ರತ್ಯೇಕ ಸಚಿವರು ಇರುವ ಅನಿವಾಸಿ ಖಾತೆ ಹಾಗೂ ಸಾವಿರ ಕೋಟಿ ನಿಧಿಯನ್ನೂ ಕೂಡಲೇ ಸ್ಥಾಪಿಸಬೇಕು ಎಂದು ಆಗ್ರಹಿಸುತ್ತೇವೆ. ಇದಕ್ಕಾಗಿ ಈ ಹಿಂದೆ ಭರವಸೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಸಚಿವ ಯು.ಟಿ.ಖಾದರ್ ಅವರನ್ನೂ ಭೇಟಿಯಾಗಿ ಆಗ್ರಹಿಸುತ್ತೇವೆ ಎಂದು ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
2008ರಿಂದ ಜಗತ್ತಿನ ವಿವಿಧ ಭಾಗಗಳಲ್ಲಿರುವ ಕನ್ನಡಿಗರು ಒಂದಾಗಿ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವ ಖಾತೆ, ಒಬ್ಬ ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿ ಆವರ್ತನ ನಿಧಿಯನ್ನು ಸರಕಾರ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಅದಕ್ಕಾಗಿ ಅನಿವಾಸಿಗಳು ಸಂಘಟಿತ ಪ್ರಯತ್ನ ನಡೆಸುತ್ತಿದ್ದೇವೆ. ಅಮೆರಿಕ, ಯುರೋಪ್, ಜಪಾನ್ ಮಾತ್ರವಲ್ಲದೆ ಸೌದಿ ಅರೇಬಿಯಾ, ದುಬೈ, ಅಬುಧಾಬಿ, ಖತರ್, ಬಹರೈನ್, ಕುವೈತ್ ಗಳ ಅನಿವಾಸಿ ಕನ್ನಡಿಗರು, ಅಲ್ಲಿನ ಹಲವಾರು ಕನ್ನಡ ಸಂಘಗಳು - ಸಂಘಟನೆಗಳು ಈ ಬಗ್ಗೆ ರಾಜ್ಯ ಸರಕಾರವನ್ನು ನಿರಂತರ ಆಗ್ರಹಿಸಿವೆ. ಕೇರಳ, ಪಂಜಾಬ್ ಮಾದರಿಯಲ್ಲಿ ಅನಿವಾಸಿಗಳಿಗಾಗಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವರು ಇರಬೇಕು, ಇದರಿಂದ ಅನಿವಾಸಿಗಳಿಗೂ ಪ್ರಯೋಜನ, ರಾಜ್ಯಕ್ಕೂ ಲಾಭವಾಗಲಿದೆ ಎಂದು ಹಲವಾರು ಬಾರಿ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಈಗ ಅದನ್ನು ಜಾರಿ ಮಾಡುವ ಸಮಯ ಬಂದಿದೆ. 30 ಲಕ್ಷದಷ್ಟು ಅನಿವಾಸಿ ಕನ್ನಡಿಗರು ಅಂದರೆ ಅದು ರಾಜ್ಯದ ಪಾಲಿಗೆ ಬಹಳ ದೊಡ್ಡ ಆಸ್ತಿ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಹಾಗಾಗಿ ನೂತನ ಮುಖ್ಯಮಂತ್ರಿಯವರು ಇದನ್ನು ಅವರ ಸರಕಾರದ ಆರನೇ ಗ್ಯಾರಂಟಿಯಾಗಿ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
2025ರ ಬೆಳಗಾವಿ ಅಧಿವೇಶನದ ವೇಳೆ ನಾವು ಡಾ.ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗ ಪ್ರತಿನಿಧಿಗಳು ಬೆಳಗಾವಿಗೆ ಹೋಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಿತ ಎಲ್ಲ ಗಣ್ಯರನ್ನು ಭೇಟಿಯಾಗಿ ಈ ಬಗ್ಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದೇವೆ. ಪ್ರತ್ಯೇಕ ಖಾತೆ ಹಾಗೂ ಸಚಿವರನ್ನು ನೇಮಿಸುವುದರಿಂದ ರಾಜ್ಯಕ್ಕೆ ಏನೇನು ಲಾಭ ಆಗಲಿದೆ ಎಂಬುದನ್ನೂ ನಾವು ಮನವಿಯಲ್ಲಿ ವಿವರಿಸಿದ್ದೇವೆ. ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ, ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರೂ ಅನಿವಾಸಿಗಳ ಪರವಾಗಿ ಸರಕಾರದ ಗಮನಕ್ಕೆ ಇದನ್ನು ಹಲವಾರು ಬಾರಿ ತಂದು ಸಹಕರಿಸಿದ್ದಾರೆ. ಇದು ಅನಿವಾಸಿಗಳಿಗೂ ರಾಜ್ಯದ ಆರ್ಥಿಕತೆಗೂ ಲಾಭವಾಗುವ ನಡೆಯಾಗಲಿದೆ. ಆಗ ಸರಕಾರ ಧನಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತ್ತು. ಆದರೆ ಈಗ ಸೆಕ್ರೆಟರಿಯೇಟ್ ಮಾತ್ರ ಘೋಷಣೆಯಾಗಿದೆ. ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿಯ ಆವರ್ತನ ನಿಧಿಯನ್ನೂ ಸರಕಾರ ಘೋಷಿಸಬೇಕು ಎಂದು ಝಕರಿಯಾ ಜೋಕಟ್ಟೆ ಆಗ್ರಹಿಸಿದ್ದಾರೆ.
ಅನಿವಾಸಿ ಕನ್ನಡಿಗರನ್ನು ರಾಜ್ಯ ಸರಕಾರ ಬೆಂಬಲಿಸಿ ಅವರನ್ನು ರಾಜ್ಯದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಅನಿವಾಸಿಗಳ ಹೂಡಿಕೆಯಿಂದ ನೂತನ ಉದ್ಯಮ ಸ್ಥಾಪನೆಗೆ, ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳಿವೆ. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೂ ಇದು ಪೂರಕವಾಗಲಿದೆ. ಎನ್ ಆರ್ ಐ ಬಿಸಿನೆಸ್ ಸಮಿಟ್ ಗಳಂತಹ ಸಮಾವೇಶಗಳ ಮೂಲಕ ರಾಜ್ಯಕ್ಕೆ ಬಹುದೊಡ್ಡ ಹೂಡಿಕೆ ಬರುವಂತೆ ಮಾಡಬಹುದು. ದಶಕಗಳ ಕಾಲ ವಿದೇಶಗಳಲ್ಲಿ ದುಡಿದು ನಿವೃತ್ತರಾಗಿ ದೇಶಕ್ಕೆ ವಾಪಸ್ ಬಂದವರಿಗೆ ಇಲ್ಲಿ ರಾಜ್ಯ ಸರಕಾರದಿಂದ ನೆರವು ಸಿಗಬೇಕು. ಇದನ್ನೆಲ್ಲ ಮಾಡಲು ಒಬ್ಬರು ಪ್ರತ್ಯೇಕ ಸಚಿವರು ಹಾಗೂ ಪ್ರತ್ಯೇಕ ಅನುದಾನ ಇರುವುದು ಬಹಳ ಮುಖ್ಯ ಎಂದು ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
ಅನಿವಾಸಿಗಳಲ್ಲಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿರುವ ವಿವಿಧ ಹಂತದ ಉದ್ಯೋಗಿಗಳು, ಸ್ವತಃ ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ ನಡೆಸುತ್ತಿರುವವರು ಹಾಗೂ ಕಾರ್ಮಿಕ ವರ್ಗದವರು ಇದ್ದಾರೆ. ಇದರಲ್ಲಿ ಕೊನೆಯ ಕಾರ್ಮಿಕ ವರ್ಗಕ್ಕೆ ಸರಕಾರದ ನೆರವು ಬಹಳ ಹೆಚ್ಚು ಅಗತ್ಯವಿದೆ. ಮೊದಲೆರಡು ವರ್ಗಗಳಿಗೆ ಸರಕಾರ ಸರಿಯಾದ ಪ್ರೋತ್ಸಾಹ, ಸಹಕಾರ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಚೆನ್ನಾಗಿ ಬಳಸಿಕೊಳ್ಳಬಹುದು. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಭರವಸೆ ನಮಗಿದೆ. ಆ ಮೂಲಕ ರಾಜ್ಯದ ಆರ್ಥಿಕತೆಗೂ ದೊಡ್ಡ ಕೊಡುಗೆ ಸಿಗಲಿದೆ. ಹಾಗಾಗಿ ರಾಜ್ಯ ಸರಕಾರ ಅನಿವಾಸಿಗಳಿಗೆ ಪ್ರತ್ಯೇಕ ಖಾತೆ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿ ಆವರ್ತನ ನಿಧಿ ಸ್ಥಾಪಿಸುವ ಬಗ್ಗೆ ಕೂಡಲೇ ಆದೇಶ ನೀಡಬೇಕು ಎಂದು ಝಕರಿಯಾ ಜೋಕಟ್ಟೆ ಆಗ್ರಹಿಸಿದ್ದಾರೆ.