×
Ad

ವಕ್ಫ್ ಆಸ್ತಿಗಳಿಗೆ ಖಾತೆ ಮಾಡಿಕೊಡಲು ಒಂದು ತಿಂಗಳ ಗಡುವು : ಝಮೀರ್ ಅಹ್ಮದ್ ಖಾನ್

Update: 2024-09-02 21:36 IST

ಧಾರವಾಡ : ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ವಕ್ಫ್ ಆಸ್ತಿಗಳಿಗೆ ಒಂದು ತಿಂಗಳಲ್ಲಿ ಖಾತೆ ಮಾಡಿಕೊಡಲು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಗಡುವು ನೀಡಿದ್ದಾರೆ.

ಸೋಮವಾರ ಧಾರವಾಡ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ವಕ್ಫ್ ಆಸ್ತಿಗಳ ವಿಚಾರದಲ್ಲಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಒತ್ತುವರಿ ತಡೆದು ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಗೆ ಸಂಬಂಧಿಸಿದಂತೆ ಬಾಕಿ ಇದ್ದ 190 ಆಸ್ತಿಗಳ ಪೈಕಿ 100 ಆಸ್ತಿಗಳ ಖಾತೆಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ವಕ್ಫ್ ಆಸ್ತಿಗಳ ವಿಚಾರದಲ್ಲಿ ಅರಣ್ಯ ಇಲಾಖೆ ತಗಾದೆ ಇರುವ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಹದಿನೈದು ದಿನಗಳಲ್ಲಿ ಅರಣ್ಯ ಸಚಿವರ ಜತೆ ಈ ಕುರಿತು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಅಧಿಕಾರಿಗಳು ಸಹ ಆಸ್ತಿಗಳಿಗೆ ಖಾತೆ ವಿಚಾರದಲ್ಲಿ ಮಹಾನಗರ ಪಾಲಿಕೆ, ಕಂದಾಯ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಸಮಸ್ಯೆ ಬಗೆಹರಿಸಿ ಕೊಳ್ಳಬೇಕು ಎಂದು ಝಮೀರ್ ಅಹ್ಮದ್ ಖಾನ್ ನಿರ್ದೇಶನ ನೀಡಿದರು.

ಎರಡೂ ಜಿಲ್ಲೆಯ ವಕ್ಫ್ ಅದಾಲತ್‍ನಲ್ಲಿ ಸಲ್ಲಿಕೆಯಾದ ಮನವಿಗಳ ಬಗ್ಗೆಯೂ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಶಾಸಕರಾದ ಕೋನರೆಡ್ಡಿ, ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿಗಳಾದ ದಿವ್ಯಾಪ್ರಭಾ, ಲಕ್ಷ್ಮಿ ಪ್ರಸಾದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News