×
Ad

ಸೆಲ್ಫಿ ಎಂಬ ಆತ್ಮರತಿಯ ಗೀಳು

Update: 2026-02-03 13:07 IST

ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ.

ಗಣರಾಜ್ಯೋತ್ಸವದ ದಿನ ಭಾರತೀಯರಾದ ನಮಗೆ ಹೆಮ್ಮೆಯ ದಿನವಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯರೂ ತಮ್ಮ ಅಸ್ಮಿತೆಯನ್ನು ಅಧಿಕೃತವಾಗಿ ಘೋಷಿಸಿಕೊಂಡು ಆಚರಿಸಿಕೊಂಡು ಬರಲಾಗುತ್ತಿರುವ ಸುವರ್ಣ ದಿನ. ಅತಿ ದೊಡ್ಡ ದೇಶದ ಅತ್ಯಂತ ಮಹತ್ವದ ಮೌಲಿಕವೂ ಆದ ಸಂವಿಧಾನವನ್ನು ಸಿದ್ಧಪಡಿಸಿ (ಬಾಬಾಸಾಹೇಬ ಕೃತ) ಅರ್ಪಿಸಿಕೊಂಡು ಪ್ರತಿನಿತ್ಯವೂ ಅನುಷ್ಠಾನಗೊಳಿಸಿಕೊಳ್ಳಲು ಕಟಿಬದ್ಧರಾದ ದಿನವೆಂದು ಹಲವು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರಾಯಶಃ ಇನ್ನು ಮುಂದೆಯೂ ಸಾವಿರಾರು ವರ್ಷಗಳವರೆಗೆ ಆಚರಿಸಿಕೊಂಡು ಬರುತ್ತೇವೇನೋ ಗೊತ್ತಿಲ್ಲ. ನಾಳಿನ ಭವಿಷ್ಯವನ್ನು ಕರಾರುವಾಕ್ಕಾಗಿ ಬಲ್ಲವರಾರು?

ಅರುವತ್ತು ವರ್ಷಗಳ ಹಿಂದೆ ಗಣರಾಜ್ಯೋತ್ಸವ ಎಂದರೆ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ. ಶಾಲಾ, ಕಾಲೇಜು, ಕಚೇರಿ, ಗ್ರಾಮ ಪಂಚಾಯತ್, ಅಂಗಡಿ ಮುಂಗಟ್ಟು, ಓಣಿಯ ವೃತ್ತ ಎಲ್ಲೆಂದರಲ್ಲಿ ಧ್ವಜನೆಟ್ಟು ಅದನ್ನು ಫರಾರಿಯಿಂದ ಶೃಂಗರಿಸಿ, ರಂಗೋಲಿ ಚಿತ್ತಾರ ಬಿಡಿಸಿ, ಮಕ್ಕಳಾದಿಯಾಗಿ ಎಲ್ಲರೂ ಇಸ್ತ್ರಿ ಮಾಡಿದ ಶುಭ್ರ ಪೋಷಾಕು ಅಥವಾ ಅವರವರ ಶಾಲಾ ಕಾಲೇಜುಗಳ ಸಮವಸ್ತ್ರ ಧರಿಸಿ ನಸುಕಿನ ಚಳಿಯಲ್ಲಿ ನಸು ನಡುಗುತ್ತಲೇ ಕವಾಯತ್ತು ನಡೆಸುವುದು ಇತ್ತು. ಅದನ್ನು ನೋಡುವುದೇ ಒಂದು ಸಂಭ್ರಮ. ಸೂರ್ಯೋದಯದ ಹೊಸ್ತಿಲಿಲ್ಲ ಝೇಂಡಾ ಹಾರಿಸಿ ‘ಬೊಲೊ ಭಾರತ್ ಮಾತಾ ಕೀ ಜೈ’ ’ವಂದೇ ಮಾತರಂ’ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಆಯಾ ಊರಿನ ಪೊಲೀಸ್ ಗ್ರೌಂಡ್‌ಗಳಿಗೆ ತೆರಳಿ ಅಲ್ಲಿ ಪರೇಡ್ ನೋಡುವ ಖುಷಿಯಂತೂ ಹೇಳ ತೀರಲಾಗದು. ಚಬ್ಬೀಸ್ ಜನವರಿ ಅಂದರೆ ಹಿಂದಿನ ದಿನ ರಾತ್ರಿಯೇ ಮಕ್ಕಳ ತಯಾರಿ. ಇದ್ದ ಬಟ್ಟೆಗಳನ್ನೇ ಶುಭ್ರವಾಗಿ ತೊಳೆದುಕೊಂಡು. ಚೆಂಬು, ತಂಬಿಗಿಯಲ್ಲಿ ನಿಗಿನಿಗಿ ಕೋಳಸಿ (ಇದ್ದಿಲು) ಕೆಂಡ ಹಾಕಿ ಇಸ್ತ್ರಿ ತಿದ್ದುವ ಭರಾಟೆ. ಆಗಿನ್ನೂ ಬಡಬಗ್ಗರಾದಿ ಮಧ್ಯಮ ವರ್ಗದವರು ರೊಕ್ಕ ಕೊಟ್ಟು ಇಸ್ತ್ರಿ ಮಾಡಿಸಿಕೊಳ್ಳುವುದು ಇರಲಿಲ್ಲ. ಹೀಗೆ ಇಸ್ತ್ರಿ ತೀಡುವಾಗ ಕೈ ಸುಟ್ಟುಕೊಳ್ಳುವುದು ಇತ್ತು. ಸುಟ್ಟುಕೊಂಡರೂ ಪಾಲಕರಿಗೆ ಹೇಳುವಂತಿರಲಿಲ್ಲ. ಹೇಳಿದರೆ ಅಷ್ಟು ಇಸ್ತ್ರಿಗೂ ಸಂಚಕಾರ ಬರುವುದಿತ್ತು. ಹುಡುಗಿಯರು ರಿಬ್ಬನ್ ಒಗೆದು ಮಡಿ ಮಾಡಿಕೊಳ್ಳುವುದೇ ಒಂದು ಹಬ್ಬವಾಗಿರುತ್ತಿತ್ತು. ಅಂತೂ ಅಪರೂಪಕ್ಕೆ ಬಿಳಿ ಬೂಟು ಸಿಕ್ಕರಂತೂ ಸ್ವರ್ಗಕ್ಕೆ ಮೂರಲ್ಲ ಒಂದೇ ಗೇಣು. ಯಾವಾಗ ಬೆಳಗಾಗುವುದೆಂಬ ತವಕದಲ್ಲಿ ರಾತ್ರಿ ನಿದ್ದೆ ಮಾಡುವುದು ಕೂಡ ದುಸ್ತರವೇ ಆಗುವುದಿತ್ತು. ಹೊತ್ತು ಮೂಡಿದ್ದೇ ಸಾಕು. ಲಗುಬಗೆಯಿಂದ ಆದರೆ ತುಂಬು ಸಂಭ್ರಮದಲ್ಲಿ ತಯಾರಾಗಿ ನಡೆಯುತ್ತ ಶಾಲೆ, ಕಾಲೇಜುಗಳಿಗೆ ಮಕ್ಕಳು, ಕಚೇರಿ, ಅಂಗಡಿ, ಸಂಘ, ಸಂಸ್ಥೆಗಳಿಗೆ ದೊಡ್ಡವರು ಹೋಗುವ ಸರದಿ ರಸ್ತೆಯ ತುಂಬ ಸಾಲು ದೀಪಗಳಂತೆ ಕಂಗೊಳಿಸುವುದಿತ್ತು.

ಅಲ್ಲಿ ಸರದಿಯಲ್ಲಿ ನಿಂತು ಧ್ವಜಕ್ಕೆ ಸೆಲ್ಯೂಟ್ ಹೊಡೆಯುವುದೆಂದರೆ ಅದು ಮಾಮೂಲಿಯಲ್ಲ. ಅದೊಂದು ಅಗ್ದಿ ಹೆಮ್ಮೆಯ, ಪೂರ್ಣ ಸ್ವಾಭಿಮಾನದ ಕ್ರಿಯೆಯಾಗಿರುತ್ತಿತ್ತು. ಅಟೆನ್ಸೆನ್ ಸ್ಟ್ಯಾಂಡರ್ಸಿಸ್ ಇತ್ಯಾದಿ ಆದೇಶಗಳ ಶಬ್ದಶಃ ಅರ್ಥ ತಿಳಿಯುತ್ತಿರಲಿಲ್ಲ. ಆದರೆ ಆದೇಶಗಳನ್ನು ಭಯ ಭಕ್ತಿಯಿಂದ ಪಾಲಿಸುವ ಕ್ರಿಯೆ ಮಾತ್ರ ಪ್ರೀತಿಯದಾಗಿತ್ತು. ನಂತರ ರಾಷ್ಟ್ರಗೀತೆ ಹಾಡಿ ಜೈಕಾರ ಹಾಕಿದರೆ ಒಂದು ಪೆಪ್ಪರ್‌ಮೆಂಟ್ ಡೆಫನೆಂಟ್ ಸಿಗುತ್ತಿತ್ತು. ಒಂದು ಅರ್ಧ ಚಂದ್ರದ ನಿಂಬಿ ಹುಳಿ ಪೆಪ್ಪರ್‌ಮೆಂಟ್ ಅದೆಷ್ಟು ರುಚಿಯಾಗಿರುತ್ತೆಂದರೆ ಇನ್ನೂವರೆಗೂ ಅದರ ಸ್ವಾದ ರಸನೇಂದ್ರಿಯದ ರಸಾತಳದಲ್ಲಿ ಕೈದುವಾಗಿದೆ. ಕುವೆಂಪುವಿನ ‘ಇದು ದೇವರು ತಿನ್ನುವ ಪೆಪ್ಪರ್‌ಮೆಂಟು’ ಎಂಬ ಕವನವನ್ನು ಗುನುಗುನುಸುವುದು ಮಜವೇ ಆಗಿತ್ತು.

ಆದರೆ ಈಗ ಹೊಳೆ-ಹಳ್ಳಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಈಗ ಗಣರಾಜ್ಯೋತ್ಸವದಲ್ಲಿ ಎಂದಿನಂತೆ ಶಾಲಾ, ಕಾಲೇಜು, ಕಚೇರಿ ಎಲ್ಲೆಂದರಲ್ಲಿ ಗಣರಾಜ್ಯೋತ್ಸವದ ಆಚರಣೆ ಏನೋ ನಡೆದಿದೆ. ಮೊದಲಿನ ಸಂಭ್ರಮ, ಕುತೂಹಲ ಅಸಲಿಗೆ ಆ ಖದರು, ಡೌಲುಗಳು ಇಲ್ಲವೇ ಇಲ್ಲ. ಹೀಗೆಂದು ಅಲವತ್ತುಕೊಂಡರೆ ಹಣ್ಣೆಲೆಗಳ ಹಳವಂಡವಾದಾತು! ಹಾಗೆ ನೋಡಿದರೆ ಈಗ ಮೊದಲಿಗಿಂತ ಭರ್ ಭರಾಟೆ ಇದೆ. ತರಹೇವಾರಿ ಶೃಂಗಾರದ ವಸ್ತುಗಳು, ಗರಿಗರಿ ದಿರಿಸು. ಖಾಸ್ ಝೇಂಡಾ ವಂದನೆಗೆಂದೇ ಹೊಲಿಸಿದ ಪೋಷಾಕು. ವಿವಿಧ ನಮೂನೆ ಧ್ವಜಗಳು, ಸರ್ ಭರ್ ಹರಿದಾಡುವ ವಾಹನಗಳು, ಕಿವಿಗಡಚಿಕ್ಕುವ ಮೈಕು, ಡಿಜೆ ಒಂದೇ ಎರಡೇ ಎಣಿಸಲಾಗದ ಆಧುನಿಕ ಸೌಲಭ್ಯಗಳು. ಇಷ್ಟಲಿರಲಿಕ್ಕಾಗಿಯೂ ಮಕ್ಕಳಾದಿ ದೊಡ್ಡವರಲ್ಲಿಯೂ ಆ ಮೊದಲಿನ ಸಂಭ್ರಮ, ಕುತೂಹಲ ನಾಪತ್ತೆ. ಕಾರಣ ಬೇಕೆನಿಸಿದ್ದೆಲ್ಲ ಕ್ಷಣ ಮಾತ್ರದಲ್ಲೇ ಅಂಗೈಯಲ್ಲಿ ದೊರೆಯುವಾಗ ಕುತೂಹಲಕ್ಕೆ ಜಾಗವಾದರೂ ಎಲ್ಲಿದೆ? ಆದ್ದರಿಂದ ಇಂದಿನ ರಾಷ್ಟ್ರೀಯ ಹಬ್ಬಗಳೆಂದರೆ ಅವು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವರಾತಗಳೆಂದೇ ಹೇಳಬೇಕು. ಇಂದು ಕಂಡದ್ದು ಸೆಲ್ಫೋತ್ಸವವೇ ಹೊರತು ಗಣರಾಜ್ಯೋತ್ಸವವಲ್ಲ.

ಸುಮ್ಮನೆ ಮೊನ್ನೆಯ ಧ್ವಜಾರೋಹಣದ ಪ್ರಸಂಗದ ಮೇಲೆ ಕಣ್ಣು ಹಾಯಿಸಿದರೂ ಸಾಕು. ಎಲ್ಲರೂ ತಮ್ಮ ತಮ್ಮ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವಲ್ಲಿ ಅದೆಷ್ಟು ವ್ಯಸ್ತರಾಗಿದ್ದರೆಂದರೆ ಅವರ್ಯಾರಿಗೂ ಅಲ್ಲಿ ಮಾತಾಡುತ್ತಿರುವವರು ಯಾರು? ಏನು ಮಾತಾಡುತ್ತಿದ್ದಾರೆ? ಅಲ್ಲಿ ನಮ್ಮ ಭವಿಷ್ಯದ ಬಗೆಗೆ ಏನಾದರೂ ಇದೆಯೇ? ದೇಶಕ್ಕಾಗಿ ಬಲಿದಾನ ಕೊಟ್ಟವರು ಯಾರು? ಅವರ ತ್ಯಾಗ, ನೋವು ಇತ್ಯಾದಿ ಯಾವುದರ ಬಗೆಗೂ ಕುತೂಹಲ ಹುಟ್ಟುತ್ತಿಲ್ಲ. ಹಾಗಾದರೆ ಅವರ ಸ್ವಾದ ಕೆಟ್ಟಿದೆಯೆ? ಅದಕ್ಕೆ ಕಾರಣಗಳು ಏನಾದರೂ ಇವೆಯೇ? ಎಂಬುದರ ಕುರಿತು ಮಂಥನ ನಡೆಸುವುದು ಹೆಚ್ಚು ಸೂಕ್ತವೆಂದು ತೋರುತ್ತದೆ. ಇಲ್ಲವಾದರೆ ಅದೇ ಹಳೆಯ ರಾಗದಂತೆ ‘‘ನಮ್ಮ ಕಾಲ ಛಲೋ ಇತ್ತು. ಈಗ ಕಾಲ ಕೆಟ್ಟಿದೆ’’ ಎಂದು ವೃಥಾ ಹಳಹಳಿಸುವ ಮೂರ್ಖತನವಾದೀತು.

ಜನರೀಗ ಯಾವುದೆ ತತ್ವ, ಆದರ್ಶ ಅಥವಾ ಮಹಾನ್ ವ್ಯಕ್ತಿ-ಶಕ್ತಿಗಳ ಕೈಯಲ್ಲಿ ಇಲ್ಲ. ಅವರೀಗ ಅತ್ಯಂತ ಆಕರ್ಷಕವಾದ ಡಿಜಿಟಲ್ ಲೋಕದ ಅನಭಿಷಕ್ತ ದೊರೆಗಳಾಗಿದ್ದಾರೆ. ಕ್ಷಣ ಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಂಗೈಗೆ ನಿಲುಕಿಸುವ ಭ್ರಮೆ ಹುಟ್ಟಿಸುತ್ತಿರುವ ಡಿಜಿಟಲ್ ಪ್ರಪಂಚವನ್ನು ಹಿಂದೆ ಹಾಕುವ ಯಾವ ಟೂಲ್ಸ್‌ಗಳು ನಮ್ಮಲ್ಲಿ ಇಲ್ಲ. ಡಿಜಿಟಲ್ ಲೋಕವನ್ನು ನಿಯಂತ್ರಿಸುತ್ತಿರುವವರು ಯಾರು? ಯಾತಕ್ಕಾಗಿ ಅವರು ಅದರ ಮೇಲೆ ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದಾರೆ? ಎಂಬ ಗಂಭೀರ ಚರ್ಚೆ ಒತ್ತಟ್ಟಿಗಿರಲಿ, ಅದರ ಲಾಭದಾಯಕ ನವ ಆರ್ಥಿಕತೆಯ ಕಬಂಧ ಬಾಹುಗಳ ವಿಶ್ಲೇಷಣೆಯನ್ನು ಬದಿಗಿಟ್ಟು ಅದರಿಂದಾಗುತ್ತಿರುವ ಚಿಕ್ಕ ಪರಿಣಾಮವೊಂದನ್ನೇ ನೋಡಿದರೂ ಸಾಕು. ಅದರ ಬಲಾಢ್ಯ ಬಾಹುವಿನ ಆಕ್ರಾಂತ ನಡೆ ಕಾಣಿಸದೆ ಇರದು. ಸೆಲ್ಫಿ ಎಂಬ ಒಂದೇ ಕಾರನಾಮೆ ನೋಡಿದರೂ ಸಾಕು. ಮೊಬೈಲ್ ಎಂಬ ಮಾಂತ್ರಿಕ ಡಬ್ಬಿ (ಈ ಮೊದಲು ಟಿ.ವಿ.ಗೆ ಹಾಗೆಂದು ಕರೆಯುತ್ತಿದ್ದೇವಷ್ಟೆ) ಕೈವಶವಾದಂದಿನಿಂದ ಮನುಷ್ಯರಲ್ಲಿ ಸ್ವಾಭಾವಿಕವಾಗಿಯೇ ಇದ್ದ ಆತ್ಮರತಿಗೆ ಉಕ್ಕು ಬಂದಿದೆ. ಮೊಬೈಲ್‌ನಿಂದ ಅರ್ಥಪೂರ್ಣ ಬದುಕು ಅದೆಷ್ಟು ದಕ್ಕಿತೊ? ಬಿಟ್ಟಿತೊ? ಬೇಕಿಲ್ಲ. ದಕ್ಕಿದ್ದು ಮಾತ್ರ ಸ್ವವಿಜೃಂಭಣೆ. ಹೋದಲ್ಲಿ ಬಂದಲ್ಲಿ, ನಿಂತರೂ ಕುಂತರೂ ಅಷ್ಟೇ ಏಕೆ ಸತ್ತರೂ ಶವದ ಒಂದೆರಡು ಫೋಟೊ ಕ್ಲಿಕ್ಕಿಸದಿದ್ದರೆ ಸಮಾಧಾನವಿಲ್ಲ. ಚಿಕ್ಕ ಮಕ್ಕಳಿಂದ ಮುದುಕರವರೆಗೆ, ಭಿಕ್ಷುಕರಿಂದ ಕೋಟ್ಯಧೀಶರವರೆಗೆ ಸೆಲ್ಫಿಗಳಲ್ಲಿ ತಲ್ಲೀನ. ಗುಂಪು ಫೋಟೊಗಳಂತೂ ಸೈ. ಅದರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳದಿದ್ದರೆ ಸಮಾಧಾನವಿಲ್ಲ. ಮದುವೆ, ಸೀಮಂತ, ತೊಟ್ಟಿಲು, ಹುಟ್ಟುಹಬ್ಬ, ಸಭೆ, ಸಮಾರಂಭ, ವಿಚಾರ ಸಂಕಿರಣ, ಸಮ್ಮೇಳನ ಏನೇ ಕಾರ್ಯಕ್ರಮವಿರಲಿ ಅಲ್ಲೊಂದು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗುತ್ತಿದೆ. ಹೋಟೆಲ್, ಮಾಲ್, ಸಿನೆಮಾ ಥಿಯೆಟರ್, ಮದುವೆ ಮಂಟಪ ಮುಂತಾದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಫಿ ಪಾಯಿಂಟ್ ಇರಲೇಬೇಕು. ವೇದಿಕೆ ಮೇಲೆ ಭಗವಂತನೇ ಪ್ರತ್ಯಕ್ಷನಾಗಿದ್ದರೂ ಜನರು ಮಾತ್ರ ಒಂದೆರಡು ಸೆಲ್ಫಿ ತೆಗೆದುಕೊಳ್ಳದೆ ಅವನೊಂದಿಗೆ ಮಾತನಾಡಲಾರರು.

ಸೆಲ್ಫಿಯ ಗರ್ದಿ ಗಮ್ಮತ್ ಬೇರೆ. ವಿವಿಧ ಭಂಗಿ, ಭಾವ, ಸ್ಥಳಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳಬೇಕಾದುದು ಅನಧಿಕೃತವಾಗಿ ಕಡ್ಡಾಯವಾಗಿದೆ. ಪಾಯಿಖಾನೆ ಸಮಯ ಒಂದು ಬಿಟ್ಟರೆ ಪ್ರಾಯಶಃ ಎಲ್ಲ ಅವಸರದಲ್ಲಿಯೂ ಫೋಟೊ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತವರಿಗೂ ಕಡಿಮೆ ಇಲ್ಲ. ಪ್ರಿವೆಡ್ಡಿಂಗ್ ಫೋಟೊಗ್ರಫಿ ಇನ್ನೊಂದು ಗೋಳು. ಹೀಗೆ ತೆಗೆದುಕೊಂಡ ಚಿತ್ರಗಳನ್ನು ದಾಖಲು ಮಾಡಿ ಇಡಲಾಗುತ್ತಿದೆಯೇ ಎಂದರೆ ಇಲ್ಲ. ಏಕೆಂದರೆ ತಾವು ಹೊಡೆದುಕೊಂಡ ಎಲ್ಲ ಸೆಲ್ಫಿಗಳನ್ನು ಪ್ರಿಂಟ್ ಹಾಕಿಸಿಕೊಂಡರೆ ಅವುಗಳನ್ನಿಡಲು ಕೋಟೆಯೊಂದನ್ನು ಕಟ್ಟಿಸಬೇಕಾಗಬಹುದು. ಆದ್ದರಿಂದ ಹೋದವಾರ ತೆಗೆದ ಫೋಟೊ ಈ ವಾರ ಡಿಲೀಟ್. ಈ ಇವೆಂಟ್ ಫೋಟೊ ಮುಂದಿನ ಇವೆಂಟ್‌ಗೆ ಡಿಲೀಟ್. ಮೊಬೈಲ್‌ಗೂ ಒಂದು ಮಿತಿ ಇದೆ. ಫೋಟೊಗಳು ತುಂಬಿ ತುಳುಕಿದೊಡನೆ ಅದು ಮುಂದಿನವುಗಳನ್ನು ಇಂಬಿಟ್ಟುಕೊಳ್ಳಲಾಗದೆ ಒದ್ದಾಡುತ್ತದೆ. ಆಗ ಹಿಂದಿನವುಗಳನ್ನು ಅಳಿಸಿ ಹಾಕದೆ ಗತ್ಯಂತರವಿಲ್ಲ.

ಸೆಲ್ಫಿಗಳಿಗಾಗಿಯೇ ಪ್ರಾಣ ತೆತ್ತವರು ಉಂಟು. ತಮ್ಮ ಫೋಟೊಗಳನ್ನು ವಿರಾಮದ ಹೊತ್ತಿನಲ್ಲಿ ತಾವೇ ನೋಡಿ ಖುಷಿ ಪಟ್ಟವರಂತೆ ವಿಷಾದ, ದುಃಖ ಪಟ್ಟು ನರಳುವವರು ಇಲ್ಲದಿಲ್ಲ. ತಮ್ಮ ಫೋಟೊಗಳನ್ನೇ ಕ್ಲಿಕ್ಕಿಸಿಕೊಳ್ಳುವ ಗುಂಗಿನಲ್ಲಿ ಕಳೆದು ಹೋದವರಿಗೆ ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವ ಗಮನಿಸಲು ಪುರುಸೊತ್ತಾದರೂ ಎಲ್ಲಿದೆ. ಹುಡುಗರಂತೂ ಗೆಳೆಯ, ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಪ್ರಚಂಡ ಪ್ರತಿಭೆಯನ್ನು ವಿನಿಯೋಗಿಸುವುದನ್ನು ನೋಡಬೇಕು. ಫೋಟೊ ತೆಗೆಯುವ ಆ್ಯಂಗಲ್, ಹಿನ್ನೆಲೆ ಸೀನರಿ, ಬಣ್ಣಗಳ ಕಾಂಬಿನೇಷನ್ ಏನೇನೋ! ಅವರಿಂದಲೇ ಕೇಳಿ ಕಲಿಯಬೇಕು. ವಿದ್ಯಾರ್ಥಿಗಳು ಧ್ವಜಕ್ಕಿಂತ ಹೆಚ್ಚು ಭಕ್ತಿ ಭಾವದಿಂದ ಸೆಲ್ಫಿ ತೆಗೆಯುವುದು ಮತ್ತು ನೋಡುವುದರಲ್ಲಿ ಬಿಝಿಯಾಗಿದ್ದರೆ ಶಿಕ್ಷಕರಿಗೆ ಅವರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸ. ಕೊರೋನ ಕಾಲದಲ್ಲಿ ಮೊಬೈಲ್ ಬಳಕೆ ಕಡ್ಡಾಯ ಮಾಡಿದವರೇ ಶಿಕ್ಷಕರು. ಈಗ ಅದನ್ನು ಹಿಡಿಯಬೇಡಿರಿ ಎಂದರೆ ನಡೆದೀತೆ? ಮಜವೆಂದರೆ ಇತರರ ಫೋಟೊ ನೋಡಲು ಯಾರಿಗೂ ಮನಸ್ಸಿಲ್ಲ. ತಮ್ಮ ಫೋಟೊ ತಾವು ನೋಡಿಕೊಳ್ಳುವುದರಲ್ಲೇ ಸುಖವಿದೆ. ಇದಕ್ಕೆ ಕೆಲವು ಅಪವಾದಗಳಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ತಾನು ಹೇಗೆ ಕಾಣುತ್ತೇನೆ ಎಂಬ ಕುತೂಹಲ ಇದೆಯಲ್ಲ? ಇದಕ್ಕಿಂತ ಪ್ರಖರವಾದ ಕುತೂಹಲ ಇನ್ನೊಂದಿಲ್ಲವಂತೆ. ಸೆಲ್ಫಿ ಹಾವಳಿಯಿಂದಾಗಿ ಮೇಕಪ್ ಪಿಡುಗು ಉಲ್ಬಣಿಸಿದೆ. ಪ್ರಸಾಧನ ವಸ್ತುಗಳು, ಶೃಂಗಾರ ಸಾಧನಗಳಿಗೆ ಸಿಕ್ಕಾಪಟ್ಟೆ ವ್ಯಾಪಾರ. ಜನರು ತಿನ್ನುವ ಅಥವಾ ಜ್ಞಾನಾರ್ಜನೆ ಗೈಯುವ ಸಾಧನಗಳಿಗಿಂತ ಪ್ರಸಾಧನ ಮತ್ತು ಫ್ಯಾಷನ್ ವಸ್ತುಗಳಿಗೆ ಹೆಚ್ಚು ಹಣ ವಿನಿಯೋಗಿಸುವಂತೆ ಮಾಡಿದೆ ಆಧುನಿಕ ಮಾರುಕಟ್ಟೆ.

ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಇತ್ಯಾದಿಗಳ ಮೂಲಕ ಒದಗಿ ಬರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಐ ಮುಂತಾದವುಗಳು ಮಾನವ ಶ್ರಮವನ್ನು ಕಡಿಮೆ ಮಾಡುವುದರೊಂದಿಗೆ ಅವರ ಬುದ್ಧಿಮತ್ತೆಯನ್ನು ಇನ್ನೂ ಉತ್ಕೃಷ್ಟವಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಮನುಷ್ಯರು ತಮ್ಮ ಬುದ್ಧಿಯನ್ನು ಹೊಸ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಮೂಲಕ ಹೊಸ ಲೋಕವನ್ನೇ ನಿರ್ಮಿಸಲು ಶಕ್ತರು ಎಂಬುದನ್ನು ಇವು ಸಾಬೀತು ಮಾಡಿವೆ. ಮನುಷ್ಯರು ಬೇರೆ ಗ್ರಹಗಳಿಗೆ ಲಗ್ಗೆಯಿಟ್ಟು ಅಲ್ಲಿಯೂ ನೆಲೆಸುವ ದಿನ ದೂರವಿಲ್ಲ. ದೇದಿಪ್ಯಮಾನ ವಿಜ್ಞಾನ, ತಂತ್ರಜ್ಞಾನಗಳ ಆವಿಷ್ಕಾರಗಳು ಒಂದೆಡೆ ಇದ್ದರೆ, ಅವುಗಳನ್ನು ಕೆಲವೇ ಜನರು ತಮ್ಮ ಕಬ್ಜಾದಲ್ಲಿ ಇಟ್ಟುಕೊಂಡು ಆರ್ಥಿಕ ಲಾಭದ ಲಾಯಕ್ಕೆ ಬಿಗಿದು ಮನುಷ್ಯರನ್ನು ಬಲಿ ಪಡೆಯುತ್ತಿರುವ ವಿದ್ಯಮಾನ ಇನ್ನೊಂದೆಡೆ ಇದೆ. ಸಮಸ್ಯೆ ಡಿಜಿಟಲ್ ಆವಿಷ್ಕಾರಗಳಲ್ಲಿ ಇಲ್ಲ. ಅವುಗಳನ್ನು ತಮಗಾಗಿ ಮಾತ್ರ ದುಡಿಸಿಕೊಳ್ಳುತ್ತಿರುವ ಬಂಡವಾಳಶಾಹಿಗಳ ಕುತಂತ್ರದಲ್ಲಿ ಇದೆ. ಬಂಡವಾಳಿಗರು ತಮಗೆ ಲಾಭ ತರುವ ವಸ್ತು, ವಿಷಯಗಳ ಬಗೆಗೆ ಜನರಲ್ಲಿ ಮೋಹ ಹುಟ್ಟಿಸಿ ಅವರು ಅವುಗಳ ಚಟಗಾರರಾಗುವಂತೆ ಮಾಡುತ್ತಾರೆ. ಫೋಟೊ ತೆಗೆಸಿಕೊಳ್ಳುವುದು ತಪ್ಪಲ್ಲ. ಅದನ್ನೊಂದು ವ್ಯಸನ ಮಾಡಿಕೊಳ್ಳುವುದು ತಪ್ಪು. ಹಾಗಾದರೆ ಇದರಲ್ಲಿ ವ್ಯಾಪಾರಿಗಳದೇನು ತಪ್ಪು? ಜನರೇಕೆ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಬೇಕು? ಬಡವರೇಕೆ ಅದ್ದೂರಿ ಮದುವೆ ಮಾಡಿಕೊಂಡು ಸಾಲಗಾರರಾಗಬೇಕು? ಅವರಿಗೆ ಸ್ವಂತ ಬುದ್ಧಿಯಿಲ್ಲವೆ? ಎಂಬ ಪ್ರಶ್ನೆಗಳು ಹೊಟ್ಟೆ ತುಂಬಿದ ದೃಷ್ಟಿಹೀನರಿಂದ ಪುಂಖಾನುಪುಂಖವಾಗಿ ಬರುವುದುಂಟು. ತಾರ್ಕಿಕವಾಗಿ ಕೇಳಿದ ಪ್ರಶ್ನೆಗಳು ಸರಿಯಾಗಿವೆ. ಆದರೆ ತಾತ್ವಿಕವಾಗಿ ಅಂಥ ಪ್ರಶ್ನೆಗಳು ಮೂಡಿದ ವಸ್ತುಸ್ಥಿತಿಯ ಅರಿವು ಅವುಗಳನ್ನು ಕೇಳುವವರಿಗೆ ಇಲ್ಲ ಎಂದೇ ಹೇಳಬೇಕಾಗುತ್ತದೆ.

ಮನುಷ್ಯರು ಸ್ವಭಾವತಃ ಅನುಕರಣಶೀಲರು ಮತ್ತು ಭಯಾವಹರು. ಅವರು ಯಾವತ್ತೂ ಭೌತಿಕವಾಗಿ ತಮಗಿಂತ ಮೇಲು ವರ್ಗದವರನ್ನು ಅನುಕರಿಸುವರಲ್ಲದೆ ಅದನ್ನೇ ಆದರ್ಶವೆಂದುಕೊಳ್ಳುತ್ತಾರೆ. ಮನುಷ್ಯರಲ್ಲಿ ವಿವೇಚನೆ ಬೆಳೆಯುವುದಕ್ಕಿಂತ ಮುಂಚೆ ಜೀವನೋತ್ಸಾಹ ಮೊಳೆದಿದೆ. ಪ್ರಚಂಡ ಜೀವನೋತ್ಸಾಹವೇ ಅವರನ್ನು ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೈ ಹಿಡಿದು ನಡೆಸಿದೆ. ಆದರೆ ಈ ಜೀವನೋತ್ಸಾಹಕ್ಕೆ ಚಿಮ್ಮು ಹಲಗೆಯಾಗಿ ಒದಗಿ ಬರುವುದೇ ಈ ಭೌತ ಪ್ರಪಂಚ. ತನ್ನ ಸುತ್ತಲಿನ ಭೌತ ಪ್ರಪಂಚದ ವಿದ್ಯಮಾನಗಳು ಮನುಷ್ಯರನ್ನು ಇನ್ನಿಲ್ಲದಂತೆ ಪ್ರಭಾವಿಸುತ್ತವೆ. ಮನುಷ್ಯರ ಈ ಮಿತಿಯನ್ನು ಯಾರೂ ಬಳಸಿಕೊಳ್ಳಬಹುದು. ಪ್ರವಾಹದಗುಂಟ ಈಸುವುದು ಸುಲಭ. ಪ್ರವಾಹದ ವಿರುದ್ಧ ಈಸಿ ಜೈಸುವುದು ಕಷ್ಟ ಸಾಧ್ಯ. ಹೀಗಾಗಿ ಮನುಷ್ಯರಿಗೆ ಸಂಭ್ರಮಿಸಲು ನೆಪ ಬೇಕು. ನೆಪಕ್ಕೆ ಒದಗಿ ಬರುವ ವಸ್ತು ವಿಷಯಗಳಿಂದ ದೂರ ನಿಲ್ಲುವುದು ಎಲ್ಲರಿಗೂ ಸಾಧ್ಯವಿಲ್ಲ. ಅಂತೆಯೇ ಅಣ್ಣ ಬಸವಣ್ಣನವರು

‘‘ವಿಷಯವೆಂಬ ಹಸುರೆನೆನ್ನ ಮುಂದೆ ತಂದು ಪಸರಿಸದಿರಯ್ಯಾ

ಪಶುವೇನು ಬಲ್ಲದು? ಹಸುರೆಂದೆಳೆಸುವುದು.

ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ,

ಸುಬುದ್ಧಿಯೆಂಬ ಉದಕವನ್ನೆರೆದು

ನೋಡಿ ಸಲಹಯ್ಯಾ ಕೂಡಲಸಂಗಮದೇವಾ’’

ಎಂದು ಹೇಳಿದ್ದಾರೆ. ಮನುಷ್ಯರಲ್ಲಿ ಸ್ವಭಾವ ಜನ್ಯವಾಗಿರುವ ವಸ್ತು ಮೋಹವನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿ ಲೋಕವೇ ಸೆಲ್ಫಿಯಂಥ ಕಡಿಮೆ ಉಪಯೋಗಿ ಹೆಚ್ಚು ಹಾನಿಕಾರಕ ಚಟಗಳನ್ನು ಬಿತ್ತಿ ಬೆಳೆಯುತ್ತಿದೆ. ಹೀಗಾಗಿಯೇ ನಮ್ಮ ರಾಷ್ಟ್ರೀಯ ಹಬ್ಬಗಳೆಲ್ಲವೂ ಮುಂಚಿನ ಆಕರ್ಷಣೆ ಮತ್ತು ಕುತೂಹಲ ಕಳೆದುಕೊಂಡು ಔಪಚಾರಿಕ ಸಂಪ್ರದಾಯಗಳಾಗಿ ನಿಲ್ಲುತ್ತಿವೆ. ಅಷ್ಟಕ್ಕೂ ಹೊಸ ಪೀಳಿಗೆಗೆ ಸ್ವಾತಂತ್ರ್ಯ ಸಂಘರ್ಷದ ಬ್ಯಾನಿ ಗೊತ್ತಿಲ್ಲವಷ್ಟೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮೀನಾಕ್ಷಿ ಬಾಳಿ

contributor

Similar News