ಸತೀಶ್ ಜಾರಕಿಹೊಳಿ

ಬೆಳಗಾವಿ : ಕಬ್ಬಿನ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದ ರೈತರಿಗೆ ಸಚಿವರು ಸಭೆ ನಡೆಸುವ ಭರವಸೆ ನೀಡಿದ್ದಾರೆ.

ಸಚಿವರ ನಿವಾಸದ ಎದುರು ಜಮಾಯಿಸಿದ ರೈತರು, ಕಬ್ಬು ಕಟಾವಿಗೆ ಸಿದ್ಧವಾಗಿದ್ದು ಹೊಲದಲ್ಲಿಯೇ ಒಣಗುತ್ತಿದೆ. ಸರಕಾರ ಕೂಡಲೇ ಕಬ್ಬಿನ ಬೆಲೆ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರೈತರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಹಿಂದೆ ಮುಖ್ಯಮಂತ್ರಿ ಬೆಳಗಾವಿಗೆ ಆಗಮಿಸಿದ್ದ ಸಂದರ್ಭದಲ್ಲಿ ಕಬ್ಬಿನ ಬೆಲೆ ನಿಗದಿ ಕುರಿತು ಪ್ರಯತ್ನ ನಡೆಸಲಾಗಿತ್ತು. ಈ ಸಂಬಂಧ ಪ್ರಸ್ತಾವವನ್ನೂ ಸಿದ್ಧಪಡಿಸಿ ನೀಡಲಾಗಿತ್ತು ಎಂದು ತಿಳಿಸಿದರು. ಆದರೆ, ಪ್ರತೀ ಟನ್ ಕಬ್ಬಿಗೆ 3,500 ರೂ.ನೀಡುವ ಪ್ರಸ್ತಾವಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದರು.

ಕನಿಷ್ಠ ಪ್ರತೀ ಟನ್‌ಗೆ 5,500 ರೂ. ದರ ನಿಗದಿಪಡಿಸಿ ಬಿಲ್ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರೈತ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಚರ್ಚೆಗೆ ಬರಬೇಕು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ರೈತ ಸಂಘಟನೆಗಳ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು. ಸಚಿವರ ಭರವಸೆಯ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಹಿಂಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor