ವಿದ್ಯಾರ್ಥಿಗಳಿಂದಲೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ : ಸ್ಪೀಕರ್ ಯು.ಟಿ.ಖಾದರ್
29ನೇ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್–2025 ಕಾರ್ಯಕ್ರಮ
ಬೆಳಗಾವಿ : ʼಮಕ್ಕಳು ದೇಶದ ಅಮೂಲ್ಯ ಸಂಪತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ಸಕ್ರಿಯ ವ್ಯಕ್ತಿತ್ವ ರೂಪಿಸಲು ನೆರವಾಗುತ್ತವೆ. ಭಾರತ ವಿಶ್ವದಲ್ಲಿ ಮೊದಲ ಸ್ಥಾನ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿದ್ದು, ಬಲಿಷ್ಠ ಭಾರತ ನಿರ್ಮಾಣ ವಿದ್ಯಾರ್ಥಿಗಳಿಂದಲೇ ಸಾಧ್ಯʼ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಹೊನಗಾ ಗ್ರಾಮದ ಫೀನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ 29ನೇ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಯದ ಮೌಲ್ಯವನ್ನು ಅರಿತು ಶಿಸ್ತುಬದ್ಧವಾಗಿ ಬದುಕು ರೂಪಿಸಿಕೊಳ್ಳಬೇಕು. ಇಂದಿನ ನಿಮ್ಮ ವ್ಯಕ್ತಿತ್ವವೇ ನಾಳೆ ನಿಮ್ಮನ್ನು ಉನ್ನತ ಸ್ಥಾನಗಳಿಗೆ ಕರೆದೊಯ್ಯುತ್ತದೆ. ಮಕ್ಕಳು ಉತ್ತಮ ಪ್ರಜೆಗಳಾಗಿ ಸಮಾಜ ಸುಧಾರಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಶಿಸ್ತು ಕಲಿಸುವ ಮಹತ್ವದ ವೇದಿಕೆ : ಬಸವರಾಜ ಹೊರಟ್ಟಿ
ವಿಧಾನ ಪರಿಷತ್ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯವಾದರೆ, ಶಿಸ್ತು ಮತ್ತು ಜೀವನಪಾಠ ಕಲಿಸುವುದು ಸ್ಕೌಟ್ಸ್–ಗೈಡ್ಸ್‌ನ ಪ್ರಮುಖ ಹೊಣೆಗಾರಿಕೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಜಾತಿ–ಧರ್ಮ ಭೇದವಿಲ್ಲದೆ ಎಲ್ಲರೂ ಸಮಾನರೆಂಬ ಮೌಲ್ಯವನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವೂ ಇಲ್ಲಿ ಅಳವಡಿಸಲಾಗುತ್ತಿದೆ. ಮಕ್ಕಳು ದೇಶಪ್ರೇಮಿಗಳಾಗಿ, ತಂದೆ–ತಾಯಿ ಹಾಗೂ ಶಿಕ್ಷಕರಿಗೆ ಗೌರವ ತರುವ ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಶಿಸ್ತುಬದ್ಧ ಜೀವನಕ್ಕೆ ಪೂರಕ : ಜಗದೀಶ್ ಶೆಟ್ಟರ್
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಶಾಲಾ ಚಟುವಟಿಕೆಗಳ ಜೊತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವದ ಕೊಡುಗೆ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಪ್ರತೀ ಶಾಲೆಯಲ್ಲಿ ಸ್ಕೌಟ್ಸ್–ಗೈಡ್ಸ್ ಆರಂಭಕ್ಕೆ ಚಿಂತನೆ : ಮಧುಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಇನ್ನಷ್ಟು ಮುಂಚೂಣಿಯಲ್ಲಿ ಬೆಳೆಯುವಂತೆ ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿ ಕೆಲಸ ಮಾಡಲಿದೆ. ರಾಜ್ಯದ ಪ್ರತೀ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಈ ಚಟುವಟಿಕೆಗಳಿಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿದರು.
ಭೂತರಾಮನಹಟ್ಟಿಯ ಮುಕ್ತಿಮಠದ ಧರ್ಮಶ್ರೀ ತಪೋರತ್ನ ಶಿವಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಗುಲಬಾರಾವ್ ಭೂಷಣ ಭೊರಸೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪ ಕಾರ್ಯದರ್ಶಿ ಬಸವರಾಜ ಹೆಗನಾಯಕ, ಅಂತರರಾಷ್ಟ್ರೀಯ ಹೆಚ್ಚುವರಿ ಆಯುಕ್ತ ಎ.ಎಸ್.ಮಧುಸೂದನ್, ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಸ್ಥಾನಿಕ ಆಯುಕ್ತ ರಾಜಶೇಖರ್ ಚಳಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಸ್ವಾಗತಿಸಿದರು. ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.