Belagavi | ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಉರುಳಿ ಬಿದ್ದ ಲಾರಿ; ಓರ್ವ ಮೃತ್ಯು, ಇಬ್ಬರು ಗಂಭೀರ
ಕುಡಚಿ (ಬೆಳಗಾವಿ ಜಿಲ್ಲೆ) : ಕುಡಚಿ–ಜಮಖಂಡಿ ರಸ್ತೆಯ ಮಧ್ಯಭಾಗದಲ್ಲಿ ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಅದರಡಿಗೆ ಸಿಲುಕಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಬಳಿ ನಡೆದಿದೆ.
ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಬಿ.ಬಿ.ಬಾವಿ ಸರಕಾರಿ ಪ್ರೌಢ ಶಾಲೆ ಹಾಲಶಿರಗೂರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾರಿ ಉರುಳಿದೆ ಎನ್ನಲಾಗಿದೆ.
ಘಟನೆಯಲ್ಲಿ ಹಾಲಶಿರಗೂರ ಗ್ರಾಮದ ಅಮೀತ್ ಕಾಂಬಳೆ (11) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಜಲಿ ಕಾಂಬಳೆ (10ನೇ ತರಗತಿ) ಹಾಗೂ ಅವಿನಾಶ ಕಾಂಬಳೆ (9ನೇ ತರಗತಿ) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.