ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೆ ಅ.27ರಂದು ಕರ್ನಾಟಕ ಬಂದ್ : ಚೂನಪ್ಪ ಪೂಜಾರಿ
ಸಾಂದರ್ಭಿಕ ಚಿತ್ರ
ಬೆಳಗಾವಿ : ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅ.26ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ಸ್ಪಂದನ ದೊರೆಯುವ ವಿಶ್ವಾಸವಿದೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ಅ.27ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರು ಸಕ್ಕರೆ ಕಾರ್ಖಾನೆಗಳ ಮಾಲಕರ ಸಭೆ ಕರೆದಿದ್ದಾರೆ. ಅದೇ ದಿನ ಮಧ್ಯಾಹ್ನ ರೈತ ಮುಖಂಡರೊಂದಿಗೂ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ಟನ್‌ಗೆ 1,000 ರೂ. ನೆರವು ಘೋಷಿಸುವ ಮೂಲಕ ಆರನೇ ಗ್ಯಾರಂಟಿಯ ರೂಪದಲ್ಲಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ತೂಕದ ಮೋಸ ತಡೆಯಲು 500 ಕೋಟಿ ರೂ. ಮೀಸಲಿಡಬೇಕು. ಬೆಳಗಾವಿಯಲ್ಲಿರುವ ಸಕ್ಕರೆ ಆಯುಕ್ತರ ಕಚೇರಿಗೆ ಆಯುಕ್ತರನ್ನು ನೇಮಕ ಮಾಡುವ ಕುರಿತು ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಒಂಬತ್ತು ವರ್ಷಗಳಿಂದ ಎಂಎಸ್‌ಪಿ ಹೆಚ್ಚಳಕ್ಕೆ ಕ್ರಮವಿಲ್ಲ: ಕಳೆದ 9 ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳದ ವಿಚಾರವನ್ನು ಕಾರ್ಖಾನೆ ಮಾಲೀಕರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ ಎಂದು ಆರೋಪಿಸಿದ ಅವರು, ರೈತರ ಹೋರಾಟದ ಮೂಲಕ ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಗಮನ ಸೆಳೆದು ಎಂಎಸ್‌ಪಿ ಹೆಚ್ಚಳಕ್ಕೆ ಒತ್ತಾಯಿಸಲಾಗಿದೆ. ಈಗಾಗಲೇ ಸಕ್ಕರೆ ಕಾರ್ಖಾನೆಗಳು ಆರಂಭವಾಗಬೇಕಿತ್ತು. ಆದರೆ, ಭೀಕರ ಬರದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರೇಮ್ ಚೌಗುಲಾ, ಕಿಶನ್ ನಂದಿ ಉಪಸ್ಥಿತರಿದ್ದರು.