ಸಾಂದರ್ಭಿಕ ಚಿತ್ರ | PC : Gemini AI

ಬೆಳಗಾವಿ : ಕಬ್ಬಿನ ಬೆಲೆ ನಿಗದಿ ವಿಚಾರವಾಗಿ 2 ತಿಂಗಳಿಂದ ನಡೆದ ರೈತರ ಹೋರಾಟಕ್ಕೆ ತೆರೆ ಬಿದ್ದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಕಬ್ಬು ಕಟಾವು ಕಾರ್ಯ ಚುರುಕುಗೊಂಡಿದೆ. ರೈತರು ಹೊಲಗಳಲ್ಲಿ ಕಟಾವು ಆರಂಭಿಸಿದ್ದು, ಸಕ್ಕರೆ ಕಾರ್ಖಾನೆಗಳೂ ಕಾರ್ಯಾರಂಭ ಮಾಡಿವೆ. ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳು ಜಿಲ್ಲಾಡಳಿತ ಪ್ರಕಟಿಸಿರುವ ದರಪಟ್ಟಿಯನ್ನು ತಮ್ಮ ಸೂಚನಾ ಫಲಕಗಳಲ್ಲಿ ಅಳವಡಿಸಿವೆ.

ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಧರಣಿ, ರಸ್ತೆ ತಡೆ ಹಾಗೂ ಪಾದಯಾತ್ರೆ ನಡೆಸಿ ಸರಕಾರದ ಮೇಲೆ ಒತ್ತಡ ಹೇರಿದ್ದರು. ನವೆಂಬರ್ 4ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿ ಟನ್‌ಗೆ 3,600 ರೂ. ದರ ಘೋಷಿಸಿದರೂ ರೈತ ಮುಖಂಡರು ಆರಂಭದಲ್ಲಿ ಒಪ್ಪಿರಲಿಲ್ಲ. ಬಳಿಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ ಅವರು ಗುರುವಾರ ರಾತ್ರಿ ದರಕ್ಕೆ ಒಪ್ಪಿಗೆ ಸೂಚಿಸಿ ಹೋರಾಟ ಅಂತ್ಯಗೊಳಿಸಿದರು. ಶುಕ್ರವಾರದಿಂದ ಕಾರ್ಖಾನೆಗಳನ್ನು ಆರಂಭಿಸುವಂತೆ ಕರೆ ನೀಡಿದರು.

ದರದ ಕುರಿತು ಜಿಲ್ಲಾಡಳಿತ ಸ್ಪಷ್ಟನೆ: ನವೆಂಬರ್ 4ರ ಸಭೆಯಲ್ಲಿ ಅಂತಿಮಗೊಳಿಸಿದಂತೆ ಮೊದಲ ಕಂತಿನಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ಹಾಗೂ ಹಂಗಾಮು ಮುಕ್ತಾಯದ ಬಳಿಕ ಎರಡನೇ ಕಂತಿನಲ್ಲಿ 100 ರೂ. ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. ಹೊಸ ಹಂಗಾಮಿಗೂ ಮುನ್ನ ಸಕ್ಕರೆಯ ಸರಾಸರಿ ಮಾರುಕಟ್ಟೆ ದರ 45 ರೂ. ಮೀರಿದರೆ ಅದರ ಆಧಾರದ ಮೇಲೆ ಹೆಚ್ಚುವರಿ ಹಣ ನೀಡಲು ನಿರ್ಧರಿಸಲಾಗಿದೆ.

ಸಕ್ಕರೆಯ ಸರಾಸರಿ ದರ 48 ರೂ. ಇದ್ದರೆ ಟನ್ ಕಬ್ಬಿಗೆ 3,650 ರೂ., 49 ರೂ. ಇದ್ದರೆ 3,750 ರೂ., 50 ರೂ. ಇದ್ದರೆ 3,850 ರೂ. ಹಾಗೂ 55 ರೂ. ಇದ್ದರೆ 4,350 ರೂ. ಪಾವತಿಸಲಾಗುತ್ತದೆ. ಸಕ್ಕರೆ ಮಾರಾಟದ ಸರಾಸರಿ ಲಾಭದಲ್ಲಿ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಕಾರ್ಖಾನೆಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ನವೆಂಬರ್ 4ರಂದು ರಾತ್ರಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ದರಗಳೇ ಅಧಿಕೃತವಾಗಿದ್ದು, ಬೇರೆ ಯಾವುದೇ ದರ ಅಂತಿಮಗೊಳಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಇದೀಗ ಕಬ್ಬು ಕಟಾವು ಹಾಗೂ ಕಾರ್ಖಾನೆಗಳ ಕಾರ್ಯಚಟುವಟಿಕೆಗಳು ಪುನರಾರಂಭಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor