ಸಾಂದರ್ಭಿಕ ಚಿತ್ರ | PC : Gemini AI

ಬೆಳಗಾವಿ : ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ತೀವ್ರ ಪ್ರತಿಭಟನೆಯ ನಡುವೆಯೇ ಸ್ಥಗಿತಗೊಂಡಿದ್ದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಶುಕ್ರವಾರದಿಂದ ಪುನಃ ಕಾರ್ಯಾರಂಭ ಮಾಡಲಿವೆ. ಆದಾಗ್ಯೂ, ಈ ನಿರ್ಧಾರದಿಂದ ದರದ ಹೋರಾಟವೇನೂ ಅಂತ್ಯಗೊಂಡಿಲ್ಲ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬೆಳಗಾವಿಯ ಮುಂಬರುವ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ಮುನ್ನ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರದಿಂದ 1,000 ಪ್ರೋತ್ಸಾಹಧನ ಘೋಷಿಸಬೇಕು; ಇಲ್ಲದಿದ್ದರೆ ಅಧಿವೇಶನದ ವೇಳೆ ಬೃಹತ್ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಎಚ್ಚರಿಕೆ ನೀಡಿದ್ದಾರೆ.

ಪೋಲಿಸ್ ಬಂಧನದಿಂದ ಬಿಡುಗಡೆಯಾದ ಬಳಿಕ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಗಳು ಪುನರಾರಂಭಗೊಳ್ಳಲು ಅವಕಾಶ ನೀಡುವಂತೆ ಹಾಗೂ ರಾಜ್ಯದ ವಿವಿಧೆಡೆ ನಡೆಯುತ್ತಿರುವ ರಸ್ತೆ ತಡೆ ಸೇರಿದಂತೆ ಪ್ರಮುಖ ಚಳವಳಿಗಳನ್ನು ತಾತ್ಕಾಲಿಕವಾಗಿ ಹಿಂಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು. ಆದರೆ, ಕಾರ್ಖಾನೆಗಳು ಪ್ರಾರಂಭವಾಗುವುದರಿಂದ ತಮ್ಮ ಹೆಚ್ಚುವರಿ ದರದ ಬೇಡಿಕೆಯನ್ನು ಹಿಂಪಡೆದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. "ಪ್ರತಿ ಟನ್ ಕಬ್ಬಿಗೆ 4,500 ದರ ನೀಡುವುದು ನಮ್ಮ ಮೂಲ ಬೇಡಿಕೆಯಾಗಿದೆ. ರಾಜ್ಯ ಸರ್ಕಾರದಿಂದ 1,000 ಪ್ರೋತ್ಸಾಹಧನ ಪಡೆಯುವ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಸದ್ಯದ ಹೊಂದಾಣಿಕೆಯಿಂದ ನಮಗೆ ಪೂರ್ಣ ತೃಪ್ತಿಯಾಗಿಲ್ಲ. ಸಿಕ್ಕಿರುವ ದರ ಹೆಚ್ಚಳವನ್ನೇ ಅಂತಿಮವೆಂದು ಭಾವಿಸಿ ಸುಮ್ಮನಾಗುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.

ಮೊದಲ ಕಂತಿನಲ್ಲಿ 3,600 ಪಾವತಿಗೆ ಒತ್ತಾಯ:

ದರ ನಿಗದಿಯ ಪ್ರಕ್ರಿಯೆಯನ್ನು ವಿವರಿಸಿದ ಪೂಜೇರಿ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ಪ್ರತಿ ಟನ್‌ಗೆ 3,250 ಇದ್ದ ದರವನ್ನು 3,500ಕ್ಕೆ ಹೆಚ್ಚಿಸಲಾಗಿತ್ತು. ಆದಾಗ್ಯೂ ರೈತರ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿ 3,600ಕ್ಕೆ ಒಪ್ಪಿಗೆ ಪಡೆದರು ಎಂದು ತಿಳಿಸಿದರು. "ನಾವು ಮೊದಲ ಕಂತಿನಲ್ಲಿಯೇ 3,650 ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದೆವು. ಆದರೆ ಕಡಿಮೆ ಇಳುವರಿ ಹೊಂದಿರುವ ಹಾಗೂ ಸರ್ಕಾರಿ ಸಕ್ಕರೆ ಕಾರ್ಖಾನೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ರೈತರು ಮತ್ತಷ್ಟು ನಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಮೊದಲ ಕಂತಾಗಿ 3,600 ಪಾವತಿಸಲು ಸಮ್ಮತಿಸಿ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದೇವೆ" ಎಂದರು. ಇದೇ ವೇಳೆ, ಬೆಳಗಾವಿಯಲ್ಲಿ ನಿಗದಿಯಾಗಿರುವ ಈ ದರ ವ್ಯವಸ್ಥೆಯು ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳ ರೈತರಿಗೂ ತಕ್ಷಣವೇ ಅನ್ವಯವಾಗಬೇಕು ಎಂದು ಅವರು ಒತ್ತಾಯಿಸಿದರು.

ಸಕ್ಕರೆ ಮಾರಾಟ ದರ ಏರಿಕೆಯಿಂದ ಬರುವ ಹೆಚ್ಚುವರಿ ಆದಾಯದಲ್ಲಿ ಶೇಕಡಾ 75ರಷ್ಟು ಪಾಲನ್ನು ರೈತರಿಗೆ ಹಾಗೂ ಶೇಕಡಾ 25ರಷ್ಟು ಪಾಲನ್ನು ಕಾರ್ಖಾನೆಗಳಿಗೆ ನೀಡುವ ವ್ಯವಸ್ಥೆಗೆ ಸಮ್ಮತಿ ಸೂಚಿಸಲಾಗಿದೆ ಎಂದು ಪೂಜೇರಿ ಮಾಹಿತಿ ನೀಡಿದರು. ಕಾರ್ಖಾನೆಗಳ ನಿರ್ವಹಣಾ ವೆಚ್ಚವನ್ನು ಪರಿಗಣಿಸಿ ಅವರಿಗೆ ಶೇ. 25ರಷ್ಟು ಪಾಲು ಬಿಟ್ಟುಕೊಡಲಾಗಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಸಕ್ಕರೆಯ ಮಾರಾಟ ದರ ಉನ್ನತ ಮಟ್ಟದಲ್ಲೇ ಮುಂದುವರಿದರೆ, ಈ ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟು 4,350ರವರೆಗೆ ಸಿಗುವ ಸಾಧ್ಯತೆ ಇದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಪ್ರೋತ್ಸಾಹಧನ ನೀಡದಿದ್ದರೆ ಅಧಿವೇಶನಕ್ಕೆ ಮುತ್ತಿಗೆ:

ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೂಜೇರಿ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಪ್ರೋತ್ಸಾಹಧನ ಘೋಷಣೆಯಾಗದಿರುವುದಕ್ಕೆ ಅಸಮಾಧಾನ ಹೊರಹಾಕಿದರು. "ರೈತರನ್ನು ಬಂಧಿಸಿ ಜೈಲಿಗಟ್ಟಿದ ತಕ್ಷಣಕ್ಕೆ ಅವರ ನ್ಯಾಯಯುತ ಹೋರಾಟ ಹತೋಟಿಗೆ ಬರುವುದಿಲ್ಲ. ಸರ್ಕಾರ ನೀಡಬೇಕಾದ ಹಣಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. 1,000 ಪ್ರೋತ್ಸಾಹಧನ ಘೋಷಿಸದೆ ಮುಖ್ಯಮಂತ್ರಿಯವರು ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದರೆ ಚಂದ್ರಶೇಖರ್ ಸ್ವಾಮೀಜಿ, ಶಶಿಕಾಂತ ಗುರೂಜಿ ಹಾಗೂ ಡಾ. ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರನ್ನು ಸಂಘಟಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಕಬ್ಬಿನ ದರದ ಜೊತೆಗೆ ನೀರಾವರಿ ಹಾಗೂ ಉಚಿತ ವಿದ್ಯುತ್ ಸಮಸ್ಯೆಗಳನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು" ಎಂದರು.

ಅಲ್ಲದೆ, ಕೇಂದ್ರ ಸರ್ಕಾರವೂ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ತಕ್ಷಣವೇ ಹೆಚ್ಚಿಸಬೇಕು. ನವೆಂಬರ್ 26ರೊಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ದೇಶವ್ಯಾಪಿ ತೀವ್ರ ಸ್ವರೂಪದ ಚಳವಳಿ ರೂಪಿಸಲಾಗುವುದು ಎಂದು ಪೂಜೇರಿ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor