ಜೈಲ್ ಭರೋ ಚಳವಳಿ: ಬೆಳಗಾವಿಯತ್ತ ಪಾದಯಾತ್ರೆಗೆ ಸಜ್ಜಾಗಿದ್ದ ರೈತರು ಪೊಲೀಸ್ ವಶಕ್ಕೆ
ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಹಿಂಡಲಗಾ ಜೈಲು ಭರೋ ಚಳವಳಿಗೆ ಪೊಲೀಸರು ಆರಂಭದಲ್ಲೇ ತಡದಿದ್ದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ನಡೆದಿದೆ.
ಬೆಳಗಾವಿಯತ್ತ ಪಾದಯಾತ್ರೆ ಮೂಲಕ ತೆರಳಲು ಸಜ್ಜಾಗಿದ್ದ ರೈತರನ್ನು ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಆರಂಭವಾಗಬೇಕಿದ್ದ ಪಾದಯಾತ್ರೆಗೂ ಮುನ್ನವೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತರು ಬೆಳಗಾವಿ ನಗರಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಕ್ತಿಮಠದ ಬಳಿ ರೈತರನ್ನು ಬಲವಂತವಾಗಿ ವಶಕ್ಕೆ ಪಡೆಯುತ್ತಿದ್ದ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಸ್ಥಳ ರಣಾಂಗಣದಂತಾಗಿತ್ತು.
ಇನ್ನು ಕಬ್ಬಿಗೆ ಪ್ರತಿ ಟನ್ಗೆ ಕನಿಷ್ಠ 5,500 ರೂಪಾಯಿ ದರ ನೀಡಬೇಕೆಂದು ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ಆದರೆ ಕಾರ್ಖಾನೆಗಳು 3,600 ರೂಪಾಯಿ ನೀಡುವ ಪ್ರಸ್ತಾಬ ಮುಂದಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ರೈತರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 1,000 ರೂಪಾಯಿ ಹೆಚ್ಚುವರಿ ದರ ಘೋಷಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರು ನಮ್ಮನ್ನು ಬಂಧಿಸಿದರೂ ಹೋರಾಟ ನಿಲ್ಲುವುದಿಲ್ಲ. ಅಗತ್ಯಬಿದ್ದರೆ ರಾಜ್ಯದ ವಿವಿಧೆಡೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕಬ್ಬಿನ ಬೆಲೆ ವಿಚಾರವಾಗಿ ಆರಂಭವಾಗಿರುವ ರೈತರ ಹೋರಾಟ ಇದೀಗ ಬೆಳಗಾವಿಯಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.