×
Ad

ಬೆಳಗಾವಿ| ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ವಿವಾಹಿತ ಯುವಕ ಆತ್ಮಹತ್ಯೆ

Update: 2026-01-28 19:56 IST

ಬೆಳಗಾವಿ: ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಾಹಿತ ಯುವಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಗದೀಶ್‌ ಯಲ್ಲಪ್ಪ ಕವಳೇಕರ (27) ಹಾಗೂ ಗಂಗಮ್ಮ ಪವಾಡೆಪ್ಪ ತ್ಯಾಪಿ (26) ಎಂದು ಗುರುತಿಸಲಾಗಿದೆ.

ಜಗದೀಶ್‌ ಪತ್ನಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಮರಳಿ ಬಂದ ಬಳಿಕ ಎರಡನೇ ಮದುವೆಯ ವಿಚಾರವನ್ನು ಇತ್ಯರ್ಥಪಡಿಸೋಣ ಎಂದು ಕುಟುಂಬಸ್ಥರು ತಿಳಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಮನೆಯಲ್ಲಿ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಸೋಮವಾರ ಮನೆ ತೊರೆದಿದ್ದ ಜಗದೀಶ್‌ ಹಾಗೂ ಗಂಗಮ್ಮ, ಬುಧವಾರ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ರಾಮದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಇಬ್ಬರ ಮೃತದೇಹ ಅಪ್ಪಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.  

ಘಟನೆಗೆ ಸಂಬಂಧಿಸಿದಂತೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News