ಸಂಜಯ ಚವ್ಹಾಣ (28) 

ಬೆಳಗಾವಿ : ಬೇರೊಬ್ಬ ಯುವತಿಯನ್ನು ಮದುವೆಯಾಗಲು ಅಡ್ಡಿಪಡಿಸುತ್ತಿದ್ದಳೆಂಬ ಕಾರಣಕ್ಕೆ ಮಹಿಳೆಯನ್ನು ಪ್ರಿಯಕರ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಚನ್ಯಾನದಡ್ಡಿ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದ ಮಹಿಳೆಯನ್ನು ಐರಾವತಿ ಖೋತ (38) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ನರೇನೂರು ಗ್ರಾಮದ ಸಂಜಯ ಚವ್ಹಾಣ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸಂಜಯ ಚವ್ಹಾಣ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಐರಾವತಿ ಪರಿಚಯವಾಗಿದ್ದಳು. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದು ಸುಮಾರು ಒಂಬತ್ತು ವರ್ಷಗಳಿಂದ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

ಈ ಮಧ್ಯೆ ಸಂಜಯ ಬೇರೊಬ್ಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಆದರೆ ಇದಕ್ಕೆ ಐರಾವತಿ ವಿರೋಧ ವ್ಯಕ್ತಪಡಿಸುತ್ತಿದ್ದಳು ಎನ್ನಲಾಗಿದೆ. ಈ ಹಿಂದೆ ಎರಡು ಬಾರಿ ಸಂಜಯಗೆ ಮದುವೆ ಸಂಬಂಧ ನಿಶ್ಚಯವಾದಾಗಲೂ ಐರಾವತಿ ಅದನ್ನು ತಪ್ಪಿಸಿದ್ದಳು ಎಂದು ಹೇಳಲಾಗಿದೆ.

ಇದೀಗ ಮೂರನೇ ಬಾರಿಗೆ ಮದುವೆಗೆ ಹೆಣ್ಣು ನಿಶ್ಚಯವಾಗಿದ್ದರೂ, ತನ್ನನ್ನು ಬಿಟ್ಟು ಮದುವೆಯಾಗಬಾರದು ಎಂದು ಐರಾವತಿ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಸಂಜಯ್ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 14ರಂದು ಐರಾವತಿ ತೋರಣಹಳ್ಳಿಯ ದೇವಸ್ಥಾನಕ್ಕೆ ತೆರಳಿದ್ದಳು. ಆದರೆ ಮನೆಗೆ ಮರಳಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಐರಾವತಿಯ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದ್ದಾರೆ. ಕರೆಗಳ ವಿವರ (ಸಿಡಿಆರ್) ಆಧರಿಸಿ ಸಂಜಯ್‌ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಸಂಜಯ್ ಕಲ್ಲು ಹಾಗೂ ಬಿಯರ್ ಬಾಟಲಿಯಿಂದ ಐರಾವತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಚನ್ಯಾನದಡ್ಡಿ ಗ್ರಾಮದ ಹೊರವಲಯದ ಕಾಡಿನಲ್ಲಿ ಮೃತದೇಹವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಹಿಳೆಯ ಮೃತದೇಹ ಸಂಪೂರ್ಣ ಕೊಳೆತು ಮೂಳೆಗಳು ಹಾಗೂ ಬಟ್ಟೆಗಳು ಮಾತ್ರ ಉಳಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.

ಸದ್ಯ ಆರೋಪಿ ಸಂಜಯ್ ಚವ್ಹಾಣನನ್ನು ಬಂಧಿಸಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಾನಂದ ಚಿಕ್ಕಮಠ/ವಾರ್ತಾಭಾರತಿ

contributor

ಶಿವಾನಂದ ಜಿ.ಚಿಕ್ಕಮಠ ಅವರು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಇವರು 'ವಾರ್ತಾಭಾರತಿ' ಪತ್ರಿಕೆಯ ಬೆಳಗಾವಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.