ಬೆಳಗಾವಿ : ಜಿಲ್ಲೆಯಲ್ಲಿ ಮತ್ತೊಂದು ಬಹುಕೋಟಿ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದ ಸಾವಿರಾರು ಜನರಿಂದ 133 ಕೋಟಿ ರೂ.ಹೂಡಿಕೆ ಮಾಡಿಸಿಕೊಂಡು ತಾಯಿ ಮತ್ತು ಪುತ್ರ ವಂಚಿಸಿರುವ ಆರೋಪ ವರದಿಯಾಗಿದೆ.
ನಿಪ್ಪಾಯ ನಂದಾ ಪಾಟೀಲ್ ಹಾಗೂ ಪುತ್ರ ಪ್ರಸಾದ್ ಪಾಟೀಲ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ನಿಪ್ಪಾಯಲ್ಲಿ ಕಚೇರಿಗಳನ್ನು ತೆರೆದಿದ್ದ ಇವರು ನಂದಾ ಟ್ರೇಡರ್ಸ್, ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್ ಹಾಗೂ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಶೇ.3ರಷ್ಟು ಮಾಸಿಕ ಬಡ್ಡಿಯ ಆಮಿಷ: ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ.3ರಷ್ಟು ಬಡ್ಡಿ ನೀಡುವುದಾಗಿ ಆರೋಪಿಗಳು ಹೂಡಿಕೆದಾರರಿಗೆ ಭರವಸೆ ನೀಡಿದ್ದರು. ನಂತರ ಹೂಡಿಕೆದಾರರು ಲಾಭಾಂಶ ಬಿಡಿ, ತಮ್ಮ ಅಸಲು ಹಣವನ್ನಾದರೂ ಹಿಂದಿರುಗಿಸುವಂತೆ ಕೇಳಿದಾಗ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ನಂದಾ ಪಾಟೀಲ್, ಪ್ರಸಾದ್ ಪಾಟೀಲ್, ಸೌರಬ್ ಮಾಳಿ ಸೇರಿದಂತೆ ಒಟ್ಟು 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೊಲೀಸ್ ಚೌಕಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಗಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.