ಅಧಿಕಾರಿಗಳು ಜನರ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸಿ: ಡಿಸಿಎಂ ಜಿ.ಪರಮೇಶ್ವರ್ ಸೂಚನೆ
ಬೆಳಗಾವಿ : ರಾಜ್ಯದ ಅಭಿವೃದ್ಧಿಯ ಬಗ್ಗೆ ಹೊಸ ಆಲೋಚನೆ, ದೃಷ್ಟಿಕೋನ ಹೊಂದಿರುವ ಮುಖ್ಯಮಂತ್ರಿಯ ಆಶಯದಂತೆ ಕೆಲಸಗಳು ತೀಕ್ಷ್ಣವಾಗಿ ಆಗಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ಜಿಲ್ಲೆಗಳ ಡಿಸಿ, ಸಿಇಒ, ಎಸ್‍ಪಿ ಹಾಗೂ ಇತರೆ ಅಧಿಕಾರಿಗಳು ಅಭಿವೃದ್ಧಿಯ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಗ್ಯಾರಂಟಿ ಅನುಷ್ಠಾನದಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅವರು ತಿಳಿಸಿದರು.
ಈ ಬಾರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿದೆ. ಈ ಭಾಗದಲ್ಲಿ ಒಟ್ಟಾರೆ ಶೇ.17ರಷ್ಟು ಮಳೆ ಕೊರತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ-ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್‍ಗಳು ನಿಯಮಿತವಾಗಿ ಸಭೆ ನಡೆಸಿ, ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ನಿರ್ದೇಶಿಸಿದರು.
ಮೇವಿನ ಕೊರತೆ ಆಧರಿಸಿ ಮೇವಿನ ಕಿಟ್‍ಗಳನ್ನು ನೀಡಬೇಕು. ಮಳೆ ಪ್ರಮಾಣವನ್ನು ನಿಖರವಾಗಿ ತಿಳಿಯಲು ಮಳೆ ಮಾಪನ ಕೇಂದ್ರಗಳನ್ನು ಆಧುನಿಕರಣಗೊಳಿಸಬೇಕು. ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಭೂಸುರಕ್ಷಾ ಯೋಜನೆಯ ಶೇ.14.88ರಷ್ಟು ದಾಖಲೆಗಳ ಡಿಜಿಟಲೀಕರಣ ಬಾಕಿ ಇದೆ. ಇದನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಅಲ್ಲದೇ, ಒಟ್ಟು 1457 ಹೊಸ ಕಂದಾಯ ಗ್ರಾಮ ರಚನೆ ಮಾಡಬೇಕಾಗಿದ್ದು, ಇದರಲ್ಲಿ 937 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಜನಗಣತಿ-2027ರ ಕಾರಣ ಅಂತಿಮ ಅಧಿಸೂಚನೆ ಹೊರಡಿಸುವುದು ಬಾಕಿಯಿದೆ. ಜನಗಣತಿ ಕಾರ್ಯಪೂರ್ಣಗೊಂಡ ನಂತರ ಯಾವುದೇ ವಿಳಂಬಕ್ಕೆ ಆಸ್ಪದ ಕೊಡದೆ ಕ್ರಮವಹಿಸಬೇಕು ಎಂದು ಪರಮೇಶ್ವರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.