ಖಾನಾಪುರ ಘಟ್ಟದಲ್ಲಿ ಧಾರಾಕಾರ ಮಳೆ: ಮಲಪ್ರಭಾ ಒಳಹರಿವು ಹೆಚ್ಚಳ
ಬೆಳಗಾವಿ : ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂಗಾರು ನಿರೀಕ್ಷೆಯಂತೆ ಸುರಿಯದಿದ್ದರೂ, ಖಾನಾಪುರ–ಕಣಕುಂಬಿ ಘಟ್ಟದ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಲಪ್ರಭಾ ನದಿಯ ಒಳಹರಿವು ಹೆಚ್ಚಳವಾಗಿದೆ.
ಸವದತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮರ್ಪಕ ಮಳೆಯ ಕೊರತೆಯಿಂದ ಅನೇಕ ರೈತರು ಬಿತ್ತನೆ ಕಾರ್ಯವನ್ನು ಮುಂದೂಡಿದ್ದರು. ಆದರೆ ನವಿಲುತೀರ್ಥ ಜಲಾಶಯಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒಳಹರಿವು ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದೆ. ಅಲ್ಪ ಪ್ರಮಾಣದ ಮಳೆಯೊಂದಿಗೆ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತರು ಮತ್ತೆ ಹೊಲಗಳತ್ತ ಮುಖ ಮಾಡಿದ್ದು, ಮುಂಗಾರು ಹಂಗಾಮಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಜಲಾಶಯದ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷದ ಇದೇ ದಿನ ಮಲಪ್ರಭಾ ಜಲಾಶಯಕ್ಕೆ 9,653 ಕ್ಯುಸೆಕ್ ಒಳಹರಿವು ದಾಖಲಾಗಿದ್ದರೆ, ಪ್ರಸಕ್ತ ವರ್ಷ ಅದು 4,082 ಕ್ಯುಸೆಕ್‌ಗೆ ಸೀಮಿತವಾಗಿದೆ. ಖಾನಾಪುರ ಭಾಗದಲ್ಲಿ ಇದೇ ರೀತಿಯ ಮಳೆ ಮುಂದುವರಿದರೆ ನವಿಲುತೀರ್ಥ ಜಲಾಶಯ 12ನೇ ಬಾರಿ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಮಲಪ್ರಭಾ ನದಿ ಉತ್ತರ ಕರ್ನಾಟಕದ ಜೀವನಾಡಿಯಾಗಿದ್ದು, ನಾಲ್ಕು ಜಿಲ್ಲೆಗಳು ಹಾಗೂ ಮೂರು ತಾಲೂಕುಗಳ ಕುಡಿಯುವ ನೀರು, ಸಾವಿರಾರು ಹೆಕ್ಟೇರ್ ಕೃಷಿಭೂಮಿಯ ನೀರಾವರಿ, ಕೈಗಾರಿಕೆಗಳು ಹಾಗೂ ಜಲವಿದ್ಯುತ್ ಉತ್ಪಾದನೆಗೆ ಪ್ರಮುಖ ಆಧಾರವಾಗಿದೆ. ಹೀಗಾಗಿ ಜಲಾಶಯ ಭರ್ತಿಯಾದರೆ ಈ ವರ್ಷವೂ ಕುಡಿಯುವ ನೀರಿನ ಸಮಸ್ಯೆ ತಪ್ಪುವ ನಿರೀಕ್ಷೆಯಿದ್ದು, ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲವಾಗಲಿದೆ.
ಆದರೆ, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ ಅನೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ನೀರಿನ ಲಭ್ಯತೆ ಮಾತ್ರವಲ್ಲ, ಅದರ ಸಮರ್ಪಕ ನಿರ್ವಹಣೆ ಹಾಗೂ ವಿತರಣೆಯೂ ಅಷ್ಟೇ ಮುಖ್ಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.