×
Ad

ಭಾಷಾ ಕಲಿಕಾ ಅಧಿನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ : ಮಧು ಬಂಗಾರಪ್ಪ

Update: 2025-12-16 17:02 IST

ಮಧು ಬಂಗಾರಪ್ಪ

ಬೆಳಗಾವಿ : ಐಸಿಎಸ್‍ಇ, ಸಿಬಿಎಸ್‍ಇ, ಐಬಿಐಜಿಸಿಎಸ್ ಹಾಗೂ ಇನ್ನಿತರ ಪಠ್ಯಕ್ರಮ ಬೋಧಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷಾ ಕಲಿಕೆಗೆ ಒತ್ತು ನೀಡಲು ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೊತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಉಪ ನಿರ್ದೇಶಕರು(ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ನೋಟಿಸ್ ಜಾರಿ ಮಾಡಿ, ಭಾಷಾ ಕಲಿಕಾ ಅಧಿನಿಯಮವನ್ನು ಅನುಷ್ಠಾನಗೊಳಿಸಲಾಗಿದ್ದು, ಕನ್ನಡ ಭಾಷಾಕಲಿಕಾ ಅಧಿನಿಯಮವನ್ನು ಪಾಲಿಸದ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆನೇಕಲ್ ತಾಲೂಕಿನ ದೊಮ್ಮಸಂದ್ರದ ದಿ ಬೆಂಗಳೂರು ಇಂಟೆರ್ ಶಾಲೆ ಮತ್ತು ದೊಡ್ಡಕಣ್ಣಹಳ್ಳಿಯ ಇನೋವೆಟೀವ್ ಶಾಲೆಯ ಮೇಲೆ ನಿಯಮಾನುಸಾರ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು 2015ನೇ ಸಾಲಿನಲ್ಲಿ ಜಾರಿಗೆ ತರಲಾಗಿದ್ದು, ಕನ್ನಡ ಭಾಷಾ ಕಲಿಕಾ ನಿಯಮಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ 2017ನೇ ಸಾಲಿನಲ್ಲಿ ರೂಪಿಸಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ನೋಂದಣಿ ಮಾಡುವಾಗ, ಕನ್ನಡ ಭಾಷಾ ಕಲಿಕಾ ಅಧಿನಿಯಮದಂತೆ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಲು ಇಲಾಖಾ ನಿಯಮಗಳನ್ನು ರೂಪಿಸಲಾಗಿದ್ದು, ಅದರಂತೆ ಷರತ್ತುಗಳಿಗೆ ಒಳಪಡಿಸಿ, ನೋಂದಣಿಯನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂದರ್ಭದಲ್ಲಿಯೂ ಸಹ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಷರತ್ತುಗಳಿಗೆ ಒಳಪಡಿಸಿ, ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ಮಧುಬಂಗಾರಪ್ಪ ತಿಳಿಸಿದರು.

ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳು ಇತರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಲು ನಿರಾಕ್ಷೇಪಣ ಪತ್ರಕ್ಕೆ ಮನವಿ ಸಲ್ಲಿಸುವಾಗ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದಾಗಿ ಮುಚ್ಚಳಿಕೆ ಪತ್ರ ಸಲ್ಲಿಸಿ, ಕನ್ನಡ ಕಲಿಕಾ ಅಧಿನಿಯಮವನ್ನು ಪಾಲಿಸುವುದಾಗಿ ಪ್ರಮಾಣೀಕರಿಸಿದಲ್ಲಿ ಮಾತ್ರ, ಸದರಿ ಶಾಲೆಗಳಿಗೆ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಷರತ್ತುಗಳಿಗೆ ಒಳಪಡಿಸಿ, ನಿರಾಕ್ಷೇಪಣ ಪತ್ರ ನೀಡಲಾಗುತ್ತಿದೆ ಎಂದು ಮಧುಬಂಗಾರಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News