ಬೆಳಗಾವಿಯಲ್ಲಿ ಎಸ್‌ಐಆರ್ ಕುರಿತು ಯಾವುದೇ ಗೊಂದಲ ಇಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ಸದ್ಯ ಯಾವುದೇ ಗೊಂದಲ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಎಸ್‌ಐಆರ್ ಕುರಿತು ಚರ್ಚಿಸಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಬಳಿಕ ಏಳು ದಿನಗಳೊಳಗೆ ನೋಟಿಸ್ ನೀಡಲಾಗುತ್ತದೆ. ಆರೋಪ ಸಾಬೀತಾದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಕಾನೂನು ಪ್ರಕಾರ ಅರ್ಜಿ ಸಲ್ಲಿಸುವುದಕ್ಕೂ ಸ್ಪಷ್ಟ ನಿಯಮಗಳಿವೆ. ಮತಗಟ್ಟೆ ಮಟ್ಟದ ಏಜೆಂಟ್ 2 ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸರಿಯಾಗಿದ್ದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಅರ್ಹ ಮತದಾರರ ಮತದಾನ ಹಕ್ಕಿಗೆ ಧಕ್ಕೆಯಾಗಿದ್ದರೆ ಈ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಮತವೂ ಅಳಿಸಲಾಗಿಲ್ಲ. ಯಾರದ್ದಾದರೂ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿದ್ದರೆ ಮಾಹಿತಿ ನೀಡಿದ ಬಳಿಕ ಪರಿಶೀಲಿಸಿ ಮತ್ತೆ ಸೇರಿಸಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.