×
Ad

Ballari | ಬಾಲ್ಯ ವಿವಾಹ ತಡೆಗೆ ನಿರ್ಲಕ್ಷ್ಯ ವಹಿಸಿದರೆ ಕ್ರಮ: ಅಂಗನವಾಡಿ ಕಾರ್ಯಕರ್ತೆಯರಿಗೆ ಲತೀಫಾಬೇಗಂ ಎಚ್ಚರಿಕೆ

Update: 2026-05-15 21:31 IST

ಬಳ್ಳಾರಿ / ಕಂಪ್ಲಿ : ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲತೀಪಾಬೇಗಂ ಎಚ್ಚರಿಕೆ ನೀಡಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾತ್ಕಾಲಿಕ ಕಚೇರಿಯಲ್ಲಿ ನಡೆದ ದೇವಸಮುದ್ರ ವಲಯ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಅವರು ಮಾತನಾಡಿದರು.

ಅಪ್ರಾಪ್ತೆಯರ ಮದುವೆ ಮಾತುಕತೆ, ನಿಶ್ಚಿತಾರ್ಥ ಅಥವಾ ಮದುವೆ ಸಿದ್ಧತೆಗಳ ಮಾಹಿತಿ ತಿಳಿದ ಕೂಡಲೇ 1098, 112 ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹಗಳನ್ನು ಪ್ರೋತ್ಸಾಹಿಸುವುದು ಅಥವಾ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು, ಪಂಚಾಯತ್ ಇಲಾಖೆಯ ಗ್ರಾಮಾಭಿವೃದ್ಧಿ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಬಾಲ್ಯ ವಿವಾಹ ತಡೆಗೆ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದು, ಪ್ರತಿದಿನ ಸಮಯಕ್ಕೆ ಸರಿಯಾಗಿ ಕೇಂದ್ರಗಳನ್ನು ಆರಂಭಿಸುವುದು, ವಿದ್ಯುತ್, ಫ್ಯಾನ್, ನೀರು ಹಾಗೂ ಶೌಚಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಅವಧಿ ಮೀರಿದ ಪಡಿತರ ವಸ್ತುಗಳನ್ನು ಬಳಸಬಾರದು ಹಾಗೂ ವಿತರಿಸಬಾರದು. ಅಡುಗೆ ತಯಾರಿಕೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಹಲವು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಮೆಟ್ರಿ, ಸಣಾಪುರ ಹಾಗೂ ದೇವಸಮುದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News