×
Ad

ಬಳ್ಳಾರಿ ಘರ್ಷಣೆ : ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲು

Update: 2026-01-02 10:40 IST

ಬಳ್ಳಾರಿ : ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರನ್ನಾಧರಿಸಿ ಜನಾರ್ಧನ ರೆಡ್ಡಿ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಸೋಮಶೇಖರ ರೆಡ್ಡಿ ಎ2, ಶ್ರೀರಾಮುಲು ಎ3, ಪಾಲಿಕೆ ವಿರೋಧ ಪಕ್ಷದ ನಾಯಕ‌ ಮೋತ್ಕರ್ ಶ್ರೀನಿವಾಸ ಅವರನ್ನು ಎ4 ಆರೋಪಿಗಳನ್ನಾಗಿ ಮಾಡಲಾಗಿದ್ದು, ಒಟ್ಟು 11 ಮಂದಿ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗುರುವಾರ ಒಂದೇ ದಿನ ಎರಡು ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಹವಂಬಾವಿಯ ನಿವಾಸದ ಬಳಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. 

ಘಟನೆ ವಿವರ :

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ ಘಟನೆ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಜ.3ರಂದು ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಜನಾರ್ಧನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ಧನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬ್ಯಾನರ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹವಂಬಾವಿ ಏರಿಯಾದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News