Ballari | ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಂಡೂರು ತಾಲೂಕು ಆಡಳಿತ ಸಜ್ಜು

Update: 2026-08-06 19:58 IST

ಸಂಡೂರು/ಬಳ್ಳಾರಿ: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಜನಸ್ನೇಹಿಯಾಗಿ ಆಚರಿಸಲು ಸಂಡೂರು ತಾಲೂಕು ಆಡಳಿತ ಸಜ್ಜಾಗಿದ್ದು, ಈ ಸಂಬಂಧ ತಹಸೀಲ್ದಾರ್ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮಾಜಸೇವೆ, ಕ್ರೀಡೆ, ರಾಷ್ಟ್ರಸೇವೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟ ಸಾಧನೆಗೈದ ವ್ಯಕ್ತಿಗಳನ್ನು ಸ್ವಾತಂತ್ರ್ಯೋತ್ಸವದಲ್ಲಿ ಸನ್ಮಾನಿಸುವಂತೆ ಒತ್ತಾಯಿಸಿದರು.

ಆರ್‌ಎಫ್‌ಒ ದಾದಾ ಕಲಂದರ್ ಮಾತನಾಡಿ, ದೇಶಸೇವೆ ಸಲ್ಲಿಸಿ ಮರಳಿರುವ ಯೋಧರ ಕುಟುಂಬಗಳನ್ನು ಸಾರ್ವಜನಿಕವಾಗಿ ಗೌರವಿಸಬೇಕು ಎಂದು ಮನವಿ ಮಾಡಿದರು. ಚೋರನೂರು ಭಾಗದ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ತಾಲೂಕಿನ ಕೀರ್ತಿ ಹೆಚ್ಚಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು ಎಂದು ಆಗ್ರಹಿಸಿದರು.

ಸಮಾಜಸೇವಕ ಪರಶುರಾಮ್ ಮಾತನಾಡಿ, ಅಪಘಾತದ ಸಂದರ್ಭಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಸಿಬ್ಬಂದಿ ಹುಲಿರಾಜ್ ಅವರಿಗೆ ‘ಕಾಯಕಯೋಗಿ ಪ್ರಶಸ್ತಿ’ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ, ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪುರಸಭೆ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸರ್ಕಾರಿ ನೌಕರರ ಸೇವೆಯನ್ನೂ ಗುರುತಿಸಿ ಸನ್ಮಾನಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿನ ಎಲ್ಲ ಸಲಹೆಗಳನ್ನು ಪರಿಶೀಲಿಸಿ, ಅರ್ಹ ಸಾಧಕರನ್ನು ಗುರುತಿಸಿ ಗೌರವಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.

ಈ ವರ್ಷವೂ ಶಾಲಾ ವಿದ್ಯಾರ್ಥಿಗಳಿಂದ ಕ್ರೀಡಾ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.

ಆಗಸ್ಟ್‌ 15ರಂದು ಬೆಳಿಗ್ಗೆ 7.30ಕ್ಕೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಬೆಳಿಗ್ಗೆ 8.30ಕ್ಕೆ ಛತ್ರಪತಿ ವಿದ್ಯಾ ಮಂದಿರದಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯ ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಪಿಎಂ ಪೋಷಣ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News