Ballari | ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ : ಲೇಖಕ ರವಿ ಹಂಜಿ ವಿರುದ್ಧ ಕ್ರಮಕ್ಕೆ ಆಗ್ರಹ
ಬಳ್ಳಾರಿ: ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ‘ಬಸವ ಮಂಟಪ’ ಕೃತಿ ರಚಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಲೇಖಕ ರವಿ ಹಂಜಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮರ್ಚೆಡ್ ಹೋಟೆಲ್‌ನಿಂದ ರಾಯಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದರು. ಬಳಿಕ ಹಳೆಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಜಾತಿ, ವರ್ಗ ಹಾಗೂ ಲಿಂಗಭೇದಗಳನ್ನು ಮೀರಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಬಸವಣ್ಣನವರು ಸಮಾನತೆಯ ಕ್ರಾಂತಿ ನಡೆಸಿದರು. ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ನೈತಿಕ ದಾರಿದೀಪವಾದ ಮಹಾನ್ ಮಾನವತಾವಾದಿಯ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಖಂಡನೀಯ ಎಂದರು.
ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ದೇಶದ ವಿವಿಧೆಡೆಯ ಶರಣರಿಗೆ ವೇದಿಕೆ ಕಲ್ಪಿಸಿ, ಮಹಿಳೆಯರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಇಂತಹ ಐತಿಹಾಸಿಕ ವ್ಯಕ್ತಿತ್ವದ ಕುರಿತು ಆಧಾರರಹಿತ ಬರಹಗಳನ್ನು ರಚಿಸಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿದೆ. ಸಂಬಂಧಪಟ್ಟವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ವಿ.ಎಸ್. ಶಿವಶಂಕರ್, ಆಂಜನೇಯ, ಗಾದಿಲಿಂಗನಗೌಡ, ರಾಮನ್, ಓಂಕಾರಪ್ಪ, ತಳವಾರ್ ದುರುಗಪ್ಪ, ಬಿ. ರಮೇಶ್, ಟಿ.ಎಂ. ಎರಿಸ್ವಾಮಿ, ಹುಲುಗಪ್ಪ ಬೆಳಗಲ್, ಸಂಗನಕಲ್ಲು ವಿಜಯಕುಮಾರ್, ಎಚ್. ಶಂಕರ್, ಭೀಮಶಂಕರ್, ಶಿವು ಅಸುಂಡಿ, ಹನುಮಂತಪ್ಪ ಕುಡತಿನಿ, ಕೋಳೂರು ಮಲ್ಲಿ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.