Ballari | ಕೆಪಿಎಸ್ ಯೋಜನೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮರಣಶಾಸನ : ಕಂಬಳಿ ಮಂಜುನಾಥ್ ಆರೋಪ
ಬಳ್ಳಾರಿ : ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಷರತ್ತುಬದ್ಧ ಸಾಲದ ನೆರವಿನೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮರಣಶಾಸನವಾಗಲಿದೆ ಎಂದು ಎಐಡಿಎಸ್‌ಒ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಪಂಚಾಯಿತಿಗಳಿಗೆ ಒಂದರಂತೆ ಒಟ್ಟು 3,674 ಕೆಪಿಎಸ್ ಶಾಲಾ ಸಂಕೀರ್ಣಗಳನ್ನು ಆರಂಭಿಸಿ, ಪ್ರತಿ ಶಾಲೆಯಲ್ಲಿ ಕನಿಷ್ಠ 1,200 ವಿದ್ಯಾರ್ಥಿಗಳ ದಾಖಲಾತಿ ಕಡ್ಡಾಯಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ 45,326 ಸರ್ಕಾರಿ ಶಾಲೆಗಳು ಶಾಶ್ವತವಾಗಿ ಮುಚ್ಚಲಿವೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 500ಕ್ಕೂ ಅಧಿಕ ಶಾಲೆಗಳು ಬಾಗಿಲು ಮುಚ್ಚುವ ಭೀತಿಯಲ್ಲಿದ್ದು, ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಗೆ ಈ ಯೋಜನೆ ಮಾರಕವಾಗಲಿದೆ ಎಂದು ದೂರಿದರು.
ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ರಾಯಚೂರಿನ ಇಡಪನೂರು, ಸ್ಟೇಷನ್ ರಸ್ತೆ ಹಾಗೂ ಕನಕಪುರದ ಹೆಗ್ಗನೂರು ಕೆಪಿಎಸ್ ಶಾಲೆಗಳಿಗೆ ಸುತ್ತಮುತ್ತಲಿನ ಹತ್ತಾರು ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲು ಆದೇಶಿಸಲಾಗಿದೆ. ಮೊದಲ ಹಂತದಲ್ಲಿ 2,000 ಶಾಲೆಗಳ ನಿರ್ವಹಣೆಯನ್ನು ಕಾರ್ಪೊರೇಟ್ ಕಂಪನಿಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. 2030ರ ನಂತರ ಸರ್ಕಾರಿ ಅನುದಾನವನ್ನೂ ಸ್ಥಗಿತಗೊಳಿಸುವ ಹುನ್ನಾರವಿದೆ ಎಂದು ಆರೋಪಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಾಗೂ ಎಡಿಬಿ ಸಾಲದ ಒಪ್ಪಂದವನ್ನು ತಕ್ಷಣವೇ ಹಿಂಪಡೆಯಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ, ರಾಜ್ಯದಲ್ಲಿ ಖಾಲಿ ಇರುವ 70 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸಲಹೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಉಪ್ಪಾರ್ ನರಸಣ್ಣ, ಸದಸ್ಯ ಮಾನಯ್ಯ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಕೆ. ಈರಣ್ಣ, ಉಪಾಧ್ಯಕ್ಷೆ ಶಾಂತಿ, ಖಜಾಂಚಿ ಅನುಪಮಾ ಹಾಗೂ ಕಚೇರಿ ಕಾರ್ಯದರ್ಶಿ ನಿಹಾರಿಕ ಉಪಸ್ಥಿತರಿದ್ದರು.