Ballari | ವಿಜೃಂಭಣೆಯ ಅದ್ದಪ್ಪ ಭೀರಲಿಂಗೇಶ್ವರ ಗಂಗೆಸ್ಥಳ ಮೆರವಣಿಗೆ
ಬಳ್ಳಾರಿ/ಕಂಪ್ಲಿ: ಪಟ್ಟಣದಲ್ಲಿ ಹಾಲುಮತ ಸಮಾಜದ ಕಂಪ್ಲಿ ನಗರ ಘಟಕದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಅದ್ದಪ್ಪ ಭೀರಲಿಂಗೇಶ್ವರ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಗಂಗೆಸ್ಥಳ ಮೆರವಣಿಗೆ ನಡುವಲ ಮಸೀದಿ, ಅಂಬೇಡ್ಕರ್ ವೃತ್ತ, ಅದ್ದಪ್ಪ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಸಣಾಪುರ ರಸ್ತೆ ಮೂಲಕ ಅದ್ದಪ್ಪ ಭೀರಲಿಂಗೇಶ್ವರ ದೇವಸ್ಥಾನ ಬಳಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಮಹಿಳೆಯರು ಕುಂಭ, ಕಳಸಗಳನ್ನು ಹೊತ್ತು ಪಾಲ್ಗೊಂಡಿದ್ದು, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ಅದ್ದಪ್ಪ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹೂವಿನ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು.
ಹಾಲುಮತ ಸಮಾಜದವರು ಸೇರಿದಂತೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಾಯಿ, ಕರ್ಪೂರ ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ನಗರ ಘಟಕ ಅಧ್ಯಕ್ಷ ಕೆ. ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಶೇಖರಪ್ಪ ಬಳ್ಳಾರಿ, ಮುಖಂಡರಾದ ಕುರಿ ಹುಸೇನಪ್ಪ, ಕೆ. ಯಮನೂರಪ್ಪ, ಮರಿ ಬಿಂಗಿ ವಿರುಪಣ್ಣ, ಬಿಂಗಿ ವೆಂಕಟೇಶ, ಕೇದರ್‌ನಾಥ, ವಿರುಪಣ್ಣ ಪಕ್ಕೀರಪ್ಪ, ಬಿ. ದೇವೇಂದ್ರ, ಪೆದ್ದಣ್ಣ, ಬಳ್ಳಾರಿ ಲಕ್ಷ್ಮಣ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.