ಕಂಪ್ಲಿ | ಮೂಲ ಆದಿವಾಸಿ ಜಾತಿಗಳನ್ನು ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಸೇರ್ಪಡೆಗೊಳಿಸಲು ಹೋರಾಟ: ಅನ್ನಪ್ಪ ಚವ್ಹಾಣ
ಕಂಪ್ಲಿ: ಪಾರ್ಧಿ, ಹರಣಶಿಕಾರಿ, ಹಕ್ಕಿಪಿಕ್ಕಿ ಸೇರಿದಂತೆ ಮೂಲ ಆದಿವಾಸಿಗಳ ಆರೇಳು ಜಾತಿಗಳನ್ನು ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಸೇರ್ಪಡೆಗೊಳಿಸುವಂತೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪಾರ್ಧಿ ಹರಣಶಿಕಾರಿ ವಿಮುಕ್ತ ಬುಡಕಟ್ಟು ಹಿತರಕ್ಷಣಾ ಸಮಿತಿಯ ಅನ್ನಪ್ಪ ಚವ್ಹಾಣ ತಿಳಿಸಿದರು.
ಪಟ್ಟಣದ 12ನೇ ವಾರ್ಡಿನ ತುಳಜಾ ಭವಾನಿ ದೇವಸ್ಥಾನದ ಬಳಿಯ ಶಿಕಾರಿ ಕಾಲೋನಿಗೆ ಹಿತರಕ್ಷಣಾ ಸಮಿತಿ ಹಾಗೂ ಧಾರವಾಡ ಜಿಲ್ಲಾ ಆದಿವಾಸಿ ಪಾರ್ಧಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭೇಟಿ ನೀಡಿ, ಸ್ಥಳೀಯ ಹಕ್ಕಿಪಿಕ್ಕಿ ಸಮುದಾಯದವರ ಕುಂದುಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ನಪ್ಪ ಚವ್ಹಾಣ, ಉತ್ತರ ಕರ್ನಾಟಕದ ಕಂಪ್ಲಿಯ ಶಿಕಾರಿ ಕಾಲೋನಿಗೆ ಮೊದಲ ಬಾರಿಗೆ ಭೇಟಿ ನೀಡಿ ಸಮುದಾಯದ ಸಮಸ್ಯೆಗಳನ್ನು ಆಲಿಸಲಾಗಿದೆ. ಇಲ್ಲಿನ ಜನರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂವಿಧಾನಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು ಮಾತನಾಡಿ, ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಶಿವಮೊಗ್ಗದ 70 ಹಾಗೂ ದಾವಣಗೆರೆಯ 25 ಮಂದಿ ಸೇರಿದಂತೆ ರಾಜ್ಯದ ಒಟ್ಟು 95 ಹಕ್ಕಿಪಿಕ್ಕಿ ಸಮುದಾಯದವರನ್ನು ಉಗಾಂಡದ ಕಾಂಗೋದಲ್ಲಿ ಬಂಧಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಬಂಧಿತರನ್ನು ಬಿಡುಗಡೆಗೊಳಿಸಿ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಿವಾಸಿ ಅಭಿವೃದ್ಧಿ ನಿಗಮದಿಂದ ಕೆಲವು ಮೂಲ ಆದಿವಾಸಿ ಜಾತಿಗಳನ್ನು ಕೈಬಿಡಲಾಗಿದ್ದು, ಅವುಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿರುವ ಹಕ್ಕಿಪಿಕ್ಕಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನೆಯ ಉಪಾಧ್ಯಕ್ಷ ರಾಮಣ್ಣ ಹರಣಶಿಕಾರಿ, ಪ್ರಧಾನ ಕಾರ್ಯದರ್ಶಿ ವಾಸುದೇವ ಕಾಳೆ, ಸದಸ್ಯ ಕೃಷ್ಣಾ ಹರಣಶಿಕಾರಿ, ಧಾರವಾಡ ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರ, ಉಪಾಧ್ಯಕ್ಷ ಪ್ರಕಾಶ ಕಟ್ಟಿಮನಿ, ಕಾರ್ಯದರ್ಶಿ ಭೋವಿರಾಜ್, ಖಜಾಂಚಿ ಗಣೇಶ ಹರಣಶಿಕಾರಿ, ಉಪ ಖಜಾಂಚಿ ಬಸವರಾಜ್ ಅಣ್ಣಿಗೇರಿ, ಮೇದಾರ ಸಂಘದ ಅಧ್ಯಕ್ಷ ಎಂ. ಗಾಳಿಕುಮಾರ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ, ಕೋಶಾಧ್ಯಕ್ಷ ಈರಣ್ಣ, ಮುಖಂಡರಾದ ಡಾ. ವಿಕಾಸ ಕಾಳೆ, ಗೋವಿಂದ ಚವ್ಹಾಣ, ಸೋಮು ಚವ್ಹಾಣ, ಮೀನಾಕ್ಷಿ ವರೇಕಲ್, ಗುನ್ನುಸಿಂಗ್, ನಾಗರಾಜ, ಕಿರಣ್, ದೇವೇಂದ್ರ, ಕೆ. ಗೋವಿಂದ ಸೇರಿದಂತೆ ಸಮುದಾಯದವರು ಪಾಲ್ಗೊಂಡಿದ್ದರು.